ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ ಇಂದು ದೂರಾಗುವುದು ಹೇಗೆ’ ಹಾಗೆ… ಹೀಗೆ… ಎಂದೆಲ್ಲಾ ಗಂಭೀರ ಚಿಂತನೆಯಲ್ಲಿ ಮುಳುಗಿ ಹೋಗಿರುವಾಗ, ನನ್ನ ಮಂಕು ಮಂಡೆಯಲ್ಲಿ ಸುಳಿದಾಡುತ್ತಿರುವ ವಿಷಯವೇನು ಗೊತ್ತಾ? – ಮಾತಾಡದೆ ಇರುವುದು ಹೇಗೆ? ಆಡಿದರೂ ಕಡಿಮೆ ಮಾತಾಡುವುದು ಹೇಗೆ?

ಮೊಬೈಲುಗಳಲ್ಲಿ, ಮೀಟಿಂಗುಗಳಲ್ಲಿ, ವೇದಿಕೆಗಳಲ್ಲಿ, ರೇಡಿಯೊ, ಟಿವಿಗಳ ಟಾಕ್ ಶೋಗಳಲ್ಲಿ, ಮೆಗಾ ಫೈಟುಗಳೆಂಬ ಹರಟೆ ಕಟ್ಟೆಗಳಲ್ಲಿ ಇಡೀ ಜಗತ್ತೇ ಮಾತಾಡಿ ದಣಿದುಹೋಗುತ್ತಿರುವಾಗ ನಾನೊಬ್ಬಳು ಮಾತು ಕಡಿಮೆ ಮಾಡೋದರಿಂದ ಏನು ಪ್ರಯೋಜನವಿದೆ? ಅದರಿಂದೇನಾದರೂ ಮಾತಿನ ಮಾಲಿನ್ಯದಿಂದಾಗಿ ಬಿಸಿಯೆದ್ದು ಹೋಗುತ್ತಿರುವ ಪರಿಸರದಲ್ಲೇನಾದರೂ ಸುಧಾರಣೆಯಾಗುವುದೇ? ಮಾತಾಡಿ ಮರುಳು ಮಾಡುವವರು ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಹಾಗೆ ಮಾತಾಡದವರಿಗೂ ಏನಾದರೂ ಪುರಸ್ಕಾರ ನೀಡಲಾಗುತ್ತದೆಯೇ? ಅಥವಾ, ಮಾತಾಡುವರೆಲ್ಲ ನನ್ನಿಂದ ಸ್ಫೂರ್ತಿ ಪಡೆದು ಮೌನದ ಹಾದಿ ಹಿಡಿಯುತ್ತಾರಾ? ಇದಾವುದೂ ಆಗುವುದಿಲ್ಲವೆಂದು ನನಗೂ ಗೊತ್ತಿದೆ. ಆದರೂ ಆ ದಿಸೆಯಲ್ಲಿ ನಾನೊಂದು ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲವೆಂದುಕೊಳ್ಳುತ್ತೇನೆ.

ಮಾತು ಕಡಿಮೆ ಮಾಡುತ್ತಿದ್ದೇನೆ ಎಂದ ಕೂಡಲೆ, ನೀವೆಲ್ಲರೂ ನಾನು ಯಾರೋ ಭಾರಿ ಮಾತುಗಾತಿ ತಿನ್ನಿಸಿದ ‘ಬಜೆ-ಬೆಣ್ಣೆ’ ಸವಿದು ಬೆಳೆದಿರುವ ಹುಟ್ಟು ವಾಚಾಳಿಯೆಂದು ಭಾವಿಸಬೇಕಾಗಿಲ್ಲ. ಮಾತು ನನ್ನ ಹುಟ್ಟುಗುಣವಂತೂ ಅಲ್ಲವೇ ಅಲ್ಲ. ನನ್ನನ್ನು ಚಿಕ್ಕಂದಿನಿಂದಲೂ ಬಲ್ಲವರು ಈಗ ನನ್ನನ್ನು ನೋಡಿದರೆ ಅವರ ಬಾಯಿಂದ ಮೊದಲು ಹೊರಡುವ ಆಶ್ಚರ್ಯಕರ ಉದ್ಗಾರವೆಂದರೆ -‘ನೀನು ಮೊದಲು ಹೀಗಿರಲಿಲ್ಲ ಬಿಡು. ಆಗೆಲ್ಲಾ ಮಾತೇ ಆಡದೆ ಮುಷುಂಡಿಯಂತೆ ಇರುತ್ತಿದ್ದೆ. ಈಗ ತುಂಬಾ ಮಾತು ನಿನ್ನದು.’ ಆ ನುಡಿಗಳ ಹಿಂದೆ ನನ್ನಲ್ಲಾದ ಬದಲಾವಣೆಯನ್ನು ನಿಖರವಾಗಿ ಗುರುತಿಸಿಬಿಟ್ಟ ಹೆಮ್ಮೆಯೋ, ಮೌನದ ಬಂಗಾರವನ್ನು ತಿಪ್ಪೆಗೆ ಬಿಸಾಕಿ, ಮಾತಿನ ಬೆಳ್ಳಿಯನ್ನು ಅವುಚಿ ಹಿಡಿದುಕೊಂಡಿರುವ ನನ್ನ ಬಗ್ಗೆ ಮರುಕವಿರುತ್ತದೆಯೋ ನನಗಿನ್ನೂ ಗುರುತಿಸಲಾಗಿಲ್ಲ. ಅದೇನೇ ಇರಲಿ, ಆ ಮಾತುಗಳಂತೂ ನೂರಕ್ಕೆ ನೂರು ನಿಜ.

ನಾನು ರಜೆಯಲ್ಲಿ ಹೋಗಲು ಇಷ್ಟಪಡುತ್ತಿದ್ದ ಜಾಗವೆಂದರೆ ನನ್ನ ಅಕ್ಕನ ಮನೆಯೊಂದೇ. ಆ ಕಾಲದಲ್ಲಿ ಬೆಂಗಳೂರಿನ ಹೊರಗಿದೆ ಎನಿಸಿಕೊಂಡಿದ್ದ ಜೀವನಭೀಮಾ ನಗರದಲ್ಲಿ ಅವರು ನೆಲೆಸಿದ್ದೇ ಅದಕ್ಕೆ ಮುಖ್ಯ ಕಾರಣ. ಬಸವನಗುಡಿ, ಚಾಮರಾಜಪೇಟೆಗಳ ಸುತ್ತಮುತ್ತ ಬೆಲ್ಲಕ್ಕೆ ಮುತ್ತಿಕೊಂಡ ಇರುವೆಗಳಂತೆ ನೆಲೆಸಿದ್ದ ನಮ್ಮ ನೆಂಟರಿಷ್ಟರು ಆ ಕಾಲಕ್ಕೇ ತಮಿಳರ ಪಾಳ್ಯವಾಗಿಹೋಗಿದ್ದ ಅಲಸೂರು ಬಡಾವಣೆಯನ್ನು ದಾಟಿಕೊಂಡು ಇತ್ತ ಬರಲು ಅಷ್ಟೇನೂ ಇಷ್ಟಪಡುತ್ತಿರಲಿಲ್ಲ. ನಮ್ಮ ಅಜ್ಜಿಯದಂತೂ ಪ್ರತಿ ಬಾರಿ ಬಂದಾಗಲೂ ಅದೇ ರಾಗ ಅದೇ ಹಾಡು. ಆಟೋ ಇಳಿಯುತ್ತಲೇ, ‘ಅಲ್ಲವೇ ವಸಂತಿ, ಬಾಡಿಗೆಗೆ ಮನೆ ಹಿಡಿಯೋದಕ್ಕೆ ನಿಮಗೆ ಇದೇ ಬಡಾವಣೆಯೇ ಆಗಬೇಕಾಗಿತ್ತೇ? ಏನೋ ನಮ್ಮವರು ತಮ್ಮವರು ಅಂತ ಇದ್ದರೆ ಅವರೊಡನೆ ನಾಲ್ಕು ಮಾತಾಡಿಕೊಂಡಿದ್ದರೆ ಬೇಜಾರು ಕಳೆದಿರುತ್ತಿತ್ತು. ಹೋಗಿಹೋಗಿ ನಮ್ಮ ಭಾಷೆಯೇ ಬರದ ಈ ಕೊಂಗಾಟಿಗಳ ನಡುವೆ ಮನೆ ಮಾಡಿದ್ದೀರಲ್ಲೇ’ ಎಂದು ಮೊಮ್ಮಗಳು ಮತ್ತು ಸೊಸೆ ಎರಡೂ ಆಗಿದ್ದ ಅಕ್ಕನ ಮುಂದೆ ಹಲುಬದಿದ್ದ ದಿನವಿಲ್ಲ. ನಾನು ‘ಅಯ್ಯೊ, ಸಾಕು ಸುಮ್ಮನಿರಜ್ಜಿ. ನೀನು ಹೇಳೋ ಹಾಗೆ ನೆಂಟರಿಷ್ಟರ ಹತ್ತಿರ ಮಾತಾಡಿದರೆ ಮನಸ್ಸಿನ ಬೇಸರ ಕಳೆಯೋದಿರಲಿ, ಅವರ ಕೊಂಕು ಮಾತಿಗೆ ನಿನಗೆ ಇನ್ನೂ ಹೆಚ್ಚು ಬೇಜಾರಾಗತ್ತೆ ಅಷ್ಟೆ’ ಎಂದು ನನ್ನ ಸೀಮಿತ ಅನುಭವದ ಹಿನ್ನಲೆಯಲ್ಲೇ ನುಡಿದು, ‘ಚೋಟುದ್ದ ಇದೀಯ ಮುಂಡೆದೇ, ನಿನಗೇನು ತಿಳಿಯತ್ತೆ ಸುಮ್ಮನಿರು.’ ಎಂದು ಅಜ್ಜಿಯಿಂದ ಬೈಯಿಸಿಕೊಳ್ಳುತ್ತಿದ್ದೆ. ಅಜ್ಜಿಗೆ ತಮ್ಮ ಮಗನ ಮನೆ ಹಿಡಿಸದಿದ್ದರೂ ನನಗಂತೂ ಅಕ್ಕನ ಮನೆ ಅಚ್ಚುಮೆಚ್ಚಾಗಿತ್ತು. ಮನೆಗೆ ಜನ ಬಂದರೆ ವಿಧಿ ಇಲ್ಲದೆ ಅವರನ್ನು ಮಾತಾಡಿಸಬೇಕಾಗುವುದಲ್ಲ ಎಂಬ ನನ್ನ ಒಂಟಿ ಗೂಬೆ ಸ್ವಭಾವಕ್ಕೆ ಅಕ್ಕನ ಮನೆ ಪ್ರಿಯವೆನಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನಿಮಗೆ ಇನ್ನೂ ನಂಬಿಕೆ ಬರಲಿಲ್ಲವೆಂದರೆ, ನನ್ನ ಒಳಮುಚ್ಚುಗ ಸ್ವಭಾವವನ್ನು ಮನದಟ್ಟು ಮಾಡಿಸಲು ಇನ್ನೊಂದು ಪುರಾವೆ ಕೊಡುತ್ತೇನೆ. ಕಾಲೇಜಿನ ಕೊನೆಯ ದಿನಗಳಲ್ಲಿ ನಡೆಯುತಿದ್ದ ‘ಮೀನು-ಬುಟ್ಟಿ’ ಆಟದಲ್ಲಿ ನನಗೆ ಬಂದಿದ್ದ ಪ್ರಶ್ನೆಗಳೆಲ್ಲ ನನ್ನ ಮೌನ ಸ್ವಭಾವದ ಕುರಿತೇ ಆಗಿತ್ತು. ‘ಮೂಗನ ಕಾಡಿದರೇನು? ಸವಿ ಮಾತನು ಆಡುವನೇನು?’ ಎಂದು ನನ್ನನ್ನು ಒಂದು ಪ್ರಶ್ನೆಯಲ್ಲಿ ಗೇಲಿ ಮಾಡಲಾಗಿತ್ತು! ಸಹಪಾಠಿಗಳ ಕಿಡಿಗೇಡಿ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಟ್ಟು ಅವರ ಬಾಯಿ ಮುಚ್ಚಿಸುವುದು ಹೇಗೆಂದು ನನಗೆ ತಿಳಿದಿದ್ದರೂ, ಅದಕ್ಕೂ ಮತ್ತೆ ಅಷ್ಟೆಲ್ಲಾ ಮಾತು ಖರ್ಚುಮಾಡಬೇಕಾಗುತ್ತಲ್ಲ ಎಂದು ಹೆದರಿ, ಎಲ್ಲಾ ಟೀಕೆ-ಟಿಪ್ಪಣಿಗಳ ನಂಜನ್ನು ನೀಲಕಂಠನಂತೆ ನುಂಗಿಕೊಂಡು, ಬೆಲ್ಲ ಜಜ್ಜಿದ ಕಲ್ಲಿನಂತೆ ಸುಮ್ಮನೆ ಕುಳಿತುಬಿಟ್ಟಿದ್ದೆ. ಇಂತಿಪ್ಪ ಮೌನ ಮುನಿಯಂತಿದ್ದ ನಾನು ಬದುಕಿನ ಯಾವುದೋ ಒಂದು ಹಂತದಲ್ಲಿ ಮೌನ ಸಾಕೆಂದು ಬಿಸಾಕಿ ಮಾತಾಡಲು ಶುರುಮಾಡಿದ್ದೆ. ಹಿಂದೆ ಮಾತಾಡದೆ ಉಳಿಸಿದ್ದ ಬಾಕಿಯನ್ನೆಲ್ಲಾ ಬಡ್ಡಿ ಸಮೇತ ತೀರಿಸಿಕೊಳ್ಳುವಂತೆ!

ಈಗೀಗ ಘಂಟೆಗಟ್ಟಲೆ ದೂರವಾಣಿ ಮಾತುಕಥೆಗಳ ನಡುವೆ ಅಪರೂಪಕ್ಕೆಂಬಂತೆ ವಿರಾಮ ದೊರಕಿದಾಗ ನನ್ನಲ್ಲಿ ನಾನು ‘ನಾನೇಕೆ ಹೀಗಾದೆ?’ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಪ್ರಯತ್ನಿಸಿದ್ದುಂಟು. ಅದಕ್ಕೆ ಕೆಲವು ಕಾರಣಗಳನ್ನೂ ಊಹಿಸಿದ್ದೇನಾದರೂ ಯಾವುದೂ ಖಚಿತವಲ್ಲ. ‘ಅವನಿಗೆ ಸ್ವಲ್ಪವೂ ಗರ್ವವಿಲ್ಲ, ಎಷ್ಟು ಚೆನ್ನಾಗಿ ಅರಳು ಹುರಿದಂತೆ ಮಾತಾಡುತ್ತಾನೆ’, ‘ಇವಳಿಗೆ ಅದೇನು ಅಹಂಕಾರ? ಮಾತಾಡಿದರೆ ಮುತ್ತು ಸುರಿಯಿತು ಅನ್ನುವ ಹಾಗೆ ಆಡ್ತಾಳೆ’, ‘ಬಾಯಿದ್ದವನು ಬರದಲ್ಲೂ ಬದುಕಿಯಾನು’ ಎಂಬಂತಹ ಮಾತುಗಳು ನನ್ನ ಕಿವಿಯ ಮೇಲೆ ಸತತವಾಗಿ ಬಿದ್ದು, ನನಗೇ ಅರಿವಿಲ್ಲದಂತೆ ನನ್ನನ್ನು ಬದಲಿಸಿರಬಹುದೇ? ಬಹುಶಃ ಮಾತಾಡದವರಿಗೆ ಈ ಲೋಕದಲ್ಲಿ ಉಳಿಗಾಲವೇ ಇಲ್ಲ ಎನ್ನುವ ಅಭದ್ರ ಭಾವನೆಯೇ ನನ್ನನು ಮೌನದ ಕೋಟೆಯೊಡೆದು ಹೊರಬರುವಂತೆ ಮಾಡಿರಬಹುದೇ? ಎಂದು ನನ್ನೊಳಗೇ ನಾನು ಯೋಚಿಸಿದ್ದುಂಟು.

ನನ್ನ ಆಪ್ತ ಗೆಳತಿಯೊಬ್ಬಳಲ್ಲಿ ನನ್ನ ನೋವು ಹಂಚಿಕೊಂಡೆ – ‘ಈಚೆಗೆ ನನ್ನ ಮಾತು ತುಂಬಾ ಜಾಸ್ತಿಯಾಗಿದೆ ಅನಿಸುತ್ತಿದೆ ಕಣೆ. ಅಗತ್ಯಕ್ಕಿಂತಲೂ ಹೆಚ್ಚು ಮಾತಾಡುತ್ತಿದ್ದೇನೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಮಾತುಗಳನ್ನೆಲ್ಲ ಆಡಿ ಮುಗಿಸಿದ ನಂತರವಷ್ಟೇ ಅಡಿದ ಮಾತು ಹೆಚ್ಚಾಯಿತೇನೊ ಎನ್ನುವಂಥ ಹಳಹಳಿಕೆಯ ಭಾವ ಮೂಡುತ್ತದೆ. ಮಾತೇ ಆಡಬಾರದು ಎಂದು ನಿರ್ಧರಿಸಿದಾಗಲೂ ಮಾತುಗಳು ನನ್ನ ಅಂಕೆ ಮೀರಿ ಹೊರಬಂದಿರುತ್ತವೆ. ಅತಿಯೆನ್ನಿಸುವಷ್ಟು ಅಲ್ಲದಿದ್ದರೂ ಅಗತ್ಯವಿರುವಷ್ಟು ಮೌನವನ್ನು ಸಾಧಿಸಲು ನಿನ್ನಲ್ಲಿ ಏನಾದರೂ ಉಪಾಯವಿದೆಯೇ..?’ ಎಂದು ನನ್ನೆಲ್ಲಾ ಸಮಸ್ಯೆಗಳನ್ನೂ ಅವಳಿಗೆ ವಿವರಿಸತೊಡಗಿದೆ.

ಬಹಳಷ್ಟು ಓದಿಕೊಂಡಿದ್ದು, ಲೋಕಾನುಭವಿಯೂ ಆಗಿದ್ದ ಅವಳಿಂದ ಏನಾದರೂ ಪರಿಹಾರ ಸಿಕ್ಕಿರುತ್ತಿತ್ತೋ ಏನೊ. ಆದರೆ, ನನ್ನ ಮಾತಿನ್ನೂ ಮುಗಿದಿತ್ತೋ ಇಲ್ಲವೋ, ನನ್ನ ಮಾತನ್ನು ಅವಳು ಪೂರ್ತಿಯಾಗಿ ಕೇಳಿಸಿಕೊಂಡಳೋ ಇಲ್ಲವೋ ಎಂದು ನನಗೇ ಅನುಮಾನ ಬರುವಂತೆ ಅವಳು ಬೇರೇನೋ ಮಾತು ಪ್ರಾರಂಭಿಸಿಬಿಟ್ಟಿದ್ದಳು! ಇದು ಕೇವಲ ನನ್ನೊಬ್ಬಳ ಸಮಸ್ಯೆ ಅಲ್ಲವೆಂದು ನನಗೆ ಮನವರಿಕೆಯಾಗಿದ್ದೇ ಆಗ. ಎಲ್ಲರೂ ಮಾತಾಡುತ್ತಾರೆ. ಒಬ್ಬರ ಮಾತು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಇನ್ನೊಬ್ಬರು ಮಾತಿಗಿಳಿದಿರುತ್ತಾರೆ. ಫೋನಿನಲ್ಲಿ ಅತ್ತಲಿಂದ ಒಬ್ಬರು ಮಾತಾಡುತ್ತಿದ್ದಾಗಲೇ ಅವರಿಗೆ ಪೈಪೋಟಿ ನೀಡುವಂತೆ ಇತ್ತಲಿಂದ ಇವರೂ ಮಾತಾಡುತ್ತಾ ಸಾಥ್ ನೀಡುತ್ತಾರೆ. ಟಿವಿಯಲ್ಲಿ ಸಂದರ್ಶನಕ್ಕೆಂದು ಕರೆಸಿದ ಅತಿಥಿಯ ಮಾತನ್ನು ಅರ್ಧದಲ್ಲಿಯೇ ತಡೆದು ಸಂದರ್ಶಕನೇ ಮಾತಾಡತೊಡಗುತ್ತಾನೆ. ಮೌನದ ಮಹತ್ವವನ್ನು ಅರಿತುಕೊಳ್ಳಲು ಕಾಸು ಕೊಟ್ಟು ಕಮ್ಮಟಗಳಲ್ಲಿ ಭಾಗವಹಿಸುವ ಭಕ್ತರು ಕೂಡ ಗುರುಗಳ ಮಾತಿನ ಹೊಳೆಯಲ್ಲಿ ಮಿಂದೆದ್ದು ಹೊರಬರುತ್ತಾರೆ. ಹೀಗಿರುವಾಗ ನಾನೊಬ್ಬಳು ಮಾತಾಡಿದರೆ ತಾನೇ ಏನಂತೆ? ಎಂದು ನನ್ನ ಮನವನ್ನು ನಾನೇ ಸಂತೈಸಿಕೊಂಡೆ.

ಮಾತುಗಾರರನ್ನು ನಮ್ಮ ಸಮಾಜ ಎಂದೂ ಪ್ರೀತಿಯಿಂದ ಸ್ವಾಗತಿಸುತ್ತಲೇ ಬಂದಿದೆ. ಅರಳು ಹುರಿದಂತೆ ಮಾತಾಡುವ ರಾಜಕಾರಣಿಯ ಬುಟ್ಟಿಗೇ ಹೆಚ್ಚು ಮತದಾರರರು ಬೀಳುತ್ತಾರೆ. ಆಕರ್ಷಕ ಮಾತಿನ ಶಿಕ್ಷಕ ವಿದ್ಯಾರ್ಥಿ ವೃಂದದಲ್ಲಿ ಜನಪ್ರಿಯನಾಗಿರುತ್ತಾನೆ. ಮಾತಿನವನಿಗಿಂತ ಮಾತಾಡದವನ ಸುತ್ತಲೇ ಅನುಮಾನಗಳ ಹುತ್ತ ಏಳುವುದು ಜಾಸ್ತಿ. ಜೊತೆಗೆ ‘ಗುಮ್ಮನಗುಸಕ’ ಎಂಬ ಉಚಿತ ಬಿರುದು ಬೇರೆ. ವಟವಟ ಎಂದು ಮಾತಾಡುವವರ ಹೃದಯದಲ್ಲಿ ಕಲ್ಮಷಗಳೊಂದು ಉಳಿಯದೆ, ಎಲ್ಲವೂ ಮಾತಿನ ಮೂಲಕ ತೊಳೆದುಹೋಗಿರುತ್ತದೆ ಎಂಬ ಏನೇನೂ ಆಧಾರಗಳಿಲ್ಲದ ನಂಬಿಕೆಯೂ ಇದೆ. ಸಂಖ್ಯಾವಾರು ದೃಷ್ಟಿಯಿಂದ ನೋಡಿದರೂ ಮಾತಾಡುವವರೇ ಬಹುಸಂಖ್ಯಾತರು! ಅಷ್ಟಕ್ಕೂ ಮಾತಾಡಬೇಡ ಎಂದು ನಮಗೆ ಹೇಳಿದವರಾದರೂ ಯಾರು? ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದ ಬಸವಣ್ಣನವರು, ನಾವಾಡುವ ನುಡಿಯ ಅಂದ ಹೆಚ್ಚಿಸಿಕೊಳ್ಳಲು ಹೇಳಿದ್ದಾರೆಯೇ ಹೊರತು ಮಾತಾಡಲೇಬಾರದೆಂದಲ್ಲವಲ್ಲ? ಡಿವಿಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಗದರಿದ್ದಾರಾದರೂ, ಆ ಸಂದರ್ಭವೇ ಬೇರೆ ಇರುವುದರಿಂದ ಅವರು ಬೈದಿದ್ದು ನಮಗಲ್ಲ ಎಂದುಕೊಂಡು ಧೈರ್ಯವಾಗಿ ಮಾತಾಡಬಹುದು. ಆದರೂ ಮಾತು ಕಡಿಮೆ ಮಾಡಿಕೊಳ್ಳುವ ಹುಚ್ಚು ನನಗೇಕೊ!

‘ಮಾತಾಡೋದೇ ತಪ್ಪಾ?’ – ಎಂದು ನಾನು ಯಾರಲ್ಲೂ ಕೇಳಿಲ್ಲವಾದರೂ, ನನ್ನನ್ನೇ ನಾನು ಆಗಾಗ ಈ ಪ್ರಶ್ನೆ ಕೇಳಿಕೊಳ್ಳುವುದುಂಟು. ತಪ್ಪಾ? ಮಾತಾಡೋದು ತಪ್ಪಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಅದೇನೇ ಇರಲಿ, ಸೀರಿಯಸ್ ಆಗಿ ಹೇಳ್ತಾ ಇದ್ದೀನಿ. ನಾನು ಮಾತು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದೀನಿ. ನೀವೇನಾದರೂ ನನ್ನಲ್ಲಿ ಮಾತಾಡೋದಿದ್ದರೆ ಈಗಲೇ ಆಡಿಬಿಡಿ.

***

(ವಿಜಯ ಕರ್ನಾಟಕ ‘ದೀಪಾವಳಿ’ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಬರಹ.)

ತಾರೆಗಳ ತೋಟದ ಮುಸ್ಸಂಜೆಗಳು

ಕೆಲಕಾಲದ ಹಿಂದೆ ನಿಧನರಾದ ಕನ್ನಡದ ಹೆಮ್ಮೆಯ ಕಲಾವಿದೆ ಪಂಡರಿಬಾಯಿ ತಮ್ಮ ಕೊನೆಗಾಲದಲ್ಲಿ ಅನಾರೋಗ್ಯ ಹೊಂದಿ, ಸಂಕಷ್ಟಕ್ಕೆ ಗುರಿಯಾಗಿ ಕೊನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ನೆರೆವಿಗೆ ಧಾವಿಸಿದ್ದು, ಚಿಕಿತ್ಸೆಗೆ ನೆರವಾಗಿದ್ದು ಎಲ್ಲರಿಗೂ ತಿಳಿದ ಸಂಗತಿಯೇ ಅಗಿದೆ. ಜಯಲಲಿತ ತಾವೂ ಕೂಡ ಮಾಜಿ ಕಲಾವಿದೆಯಾಗಿದ್ದು, ಮತ್ತೊಬ್ಬ ಕಲಾವಿದೆಯ ಕಂಬನಿ ಒರೆಸಲು ಮುಂದಾಗಿದ್ದು, ಜಯಲಲಿತಳನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಒಪ್ಪಿಕೊಳ್ಳದವರಿಗೂ ಆಕೆಯ ಮೇಲೆ ಅಭಿಮಾನ, ಗೌರವ ಮೂಡಿಸಿದವು. ನಮ್ಮ ಸರಕಾರ ಮಾತ್ರ ಪಂಡರಿಬಾಯಿ ತಾವು ಬದುಕಿದ್ದಾಗ, ಮುಖ್ಯಮಂತ್ರಿಯವರನ್ನೇ ಖುದ್ದಾಗಿ ಕೇಳಿಕೊಂಡಿದ್ದ ನಿವೇಶನವನ್ನೂ ಅವರಿಗೆ ಕೊಡದೆ ಸತಾಯಿಸಿ, ಕಲಾವಿದರ ಬಗೆಗೆ ತನಗಿರುವ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದುಕೊಂಡಿತು.

 pandari bai

ಅದಿರಲಿ, ಆದರೆ ಈಗ ನನ್ನ ಮುಂದಿರುವ ವಿಚಾರ ಅದಲ್ಲ- ನಮ್ಮ ಕಲಾವಿದರೇಕೆ ತಮ್ಮ ಕೊನೆಗಾಲದಲ್ಲಿ ಅಷ್ಟು ಅಸಹಾಯಕರಾಗಿ ಹೋಗುತ್ತಾರೆ? ಮೈಯಲ್ಲಿ ಶಕ್ತಿ, ಉತ್ಸಾಹ ತುಂಬಿದ್ದಾಗ ಲೀಲಾಜಾಲವಾಗಿ ನಟಿಸಿ, ಹಣದ ಹೊಳೆಯನ್ನೇ ಹರಿಸಿಕೊಳ್ಳುವ ನಟ, ನಟಿಯರು ತಮ್ಮ ಕೊನೆಗಾಲದಲ್ಲಿ ಅವಶ್ಯಕ ಚಿಕಿತ್ಸೆಯೂ ದೊರೆಯದೆ ಸಂಕಟ ಅನುಭವಿಸಿರುವ ನೂರಾರು ಉದಾಹರಣೆಗಳು ನಮ್ಮ ಮುಂದಿವೆ, ಅಥವಾ ಅವರ ನಿಸ್ಸಹಾಯಕ ಸ್ಥಿತಿಯಲ್ಲಿ ಮಾತ್ರ ನಿಜಸಂಗತಿ ಜನರಿಗೆ ತಿಳಿಯುವುದೋ ಏನೋ. ದೊಡ್ಡ ದೊಡ್ಡ ನಟ, ನಿರ್ದೇಶಕರ ಪರಿವಾರದವರಿಗೆ ಅದುವರೆಗೆ ಹೊರ ಪ್ರಪಂಚದ ಬಗ್ಗೆ ಕಿಂಚಿತ್ತೂ ತಿಳುವಳಿಕೆ ಇಲ್ಲದೆ ಮನೆಯ ಆವರಣದಲ್ಲಿಯೇ ಇದ್ದು, ಇದ್ದಕ್ಕಿದ್ದಂತೆ ಯಜಮಾನ ದುಡಿಯದಂತಹ ಸ್ಥಿತಿ ತಲುಪಿದಾಗ ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಕನ್ನಡನಾಡು, ನುಡಿಗೇ ಕಲಶಪ್ರಾಯವಾಗಿರುವ ನಮ್ಮೆಲ್ಲರ ಪ್ರೀತಿಯ ಕಲಾವಿದರ ಬದುಕಿನ ಮುಸ್ಸಂಜೆ ಇಷ್ಟೊಂದು ಯಾತನೆಯಿಂದ ತುಂಬಿರುವುದೇಕೆ?

ತೆರೆಯ ಮೇಲೆ ನ್ಯಾಯವಾದಿಗಳಾಗಿ, ಕಾನೂನು ರಕ್ಷಕರಾಗಿ, ವೈದ್ಯರಾಗಿ, ಧೀಮಂತ ಪತ್ರಕರ್ತರಾಗಿ ಪರೋಕ್ಷವಾಗಿ ಸಾವಿರಾರು ಯುವಕ, ಯುವತಿಯರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಅಚ್ಚಳಿಯದಂತೆ ಬೀರುವ ನಮ್ಮ ನಟ, ನಟಿಯರು ತಮ್ಮ ಖಾಸಗಿ ಜೀವನದ ಲೆಕ್ಕಾಚಾರದಲ್ಲೇಕೆ ಅಷ್ಟು ಹೀನಾಯವಾಗಿ ಸೋತು ಹೋಗುತ್ತಾರೆ? ತಾವು ಬೆವರು ಹರಿಸಿ ಸಂಪಾದಿಸಿದ ದುಡಿಮೆಯನ್ನೆಲ್ಲಾ ಯಾರು ಯಾರನ್ನೋ ನಂಬಿ ಕಳೆದುಕೊಳ್ಳುವವರು ಕೆಲವರಾದರೆ, ಮುಂದೆ ಬರಬಹುದಾದ ಕರಾಳ ದಿನಗಳ ಅರಿವಿಲ್ಲದೆ ಅತಿ ಐಷಾರಾಮದ ಬದುಕು ನಡೆಸಿ ರಾಶಿ ರಾಶಿ ರೊಕ್ಕವನ್ನು ಪೋಲು ಮಾಡಿಕೊಳ್ಳುವವರು ಮತ್ತೆ ಹಲವರು. ದೊರೆತ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಂಡು, ಬದುಕನ್ನು ಹಸನಾಗಿಸಿಕೊಂಡಿರುವ ಜಾಣಮರಿ ಕಲೆಗಾರರೂ ಇಲ್ಲದಿಲ್ಲ. ಅದರೆ ಅವರಿವರನ್ನು ನಂಬಿ ಕೆಟ್ಟಿರುವವರೇ ಅಧಿಕ.

ಯಾಕೆ ಹೀಗೆ? ತಮ್ಮ ಹಣವನ್ನು ತಾವು ಹೇಗೆ ನಿಭಾಯಿಸಿಕೊಳ್ಳಬೇಕೆನ್ನುವ ಅತಿ ಸಾಮಾನ್ಯ ತಿಳಿವಳಿಕೆಯೂ ಇವರಿಗೇಕೆ ಇರುವುದಿಲ್ಲ? ಅತ್ಯಲ್ಪ ಸಂಬಳ ಪಡೆಯುವ ಸಾಮಾನ್ಯ ಸಂಸಾರವಂದಿಗರು ಕೂಡ, ತಮ್ಮ ಇತಿ,ಮಿತಿಗಳನ್ನು ಅರಿತುಕೊಂಡು ವ್ಯವಸ್ಥಿತವಾಗಿ ಬದುಕುತ್ತಾರೆ.  ತಮ್ಮ ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸ, ರೋಗ, ರುಜಿನ ಮದುವೆ, ಮುಂಜಿ ಮುಂತಾದ ನೂರಾರು ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಕಷ್ಟಕಾಲಕ್ಕೆ ಆಗಲಿ ಎಂದು ದುಡಿಮೆಯ ಸ್ವಲ್ಪ ಭಾಗವನ್ನು ಕೂಡಿಡುತ್ತಾ ಗೌರವಯುತ ಬದುಕು ನಡೆಸುವ ಅಸಂಖ್ಯಾತ ಸಂಸಾರಗಳಿವೆ. ಇಂತಹ ಒಂದು ಕನಿಷ್ಟ ನೆಮ್ಮದಿಯೂ ಇಲ್ಲದೆ, ನಮ್ಮ ಕಲಾವಿದರು ಕಡೆಗಾಲದಲ್ಲಿ ಕಂಬನಿಗರೆಯುವುದು ನಿಜವಾಗಿ ನಮ್ಮ ಚಿತ್ರರಂಗದ ದುರಂತವೇ ಅಗಿದೆ.

ನಾನು ಯಾವ ಕಲಾವಿದರ ಬದುಕನ್ನು ಹತ್ತಿರದಿಂದ ಕಂಡಿಲ್ಲವಾದರೂ, “ಹಾಯ್ ಬೆಂಗಳೂರು ಪತ್ರಿಕೆ”ಯಲ್ಲಿ ವರುಷಗಳ ಹಿಂದೆ ಕಲ್ಪನ, ಮಂಜುಳ, ಆರತಿ ಮುಂತಾದ ನಟಿಯರ ಬಗ್ಗೆ ಪ್ರಕಟವಾಗುತ್ತಿದ್ದ ಲೇಖನಮಾಲೆ ನನಗೆ ಕಲಾವಿದರ ಬದುಕಿನ ನಶ್ವರತೆ, ಆತಂಕ, ತಲ್ಲಣಗಳನ್ನು ಪರಿಚಯಿಸಿತು. ಅಭಿರುಚಿಗೊಪ್ಪದ ಜೀವನ ಸಂಗಾತಿಯ ಆಯ್ಕೆ, ನಂಬಿಕೆ ದ್ರೋಹ, ಅತಿ ಆತ್ಮವಿಶ್ವಾಸ, ಹಟಮಾರಿತನ, ದುಂದುಗಾರಿಕೆ, ಜೂಜು ಮೋಜು, ವಾಸ್ತವ ಬದುಕಿನ ನಿರಾಕರಣ…. ಇವೆಲ್ಲಾ ನಮ್ಮ ತಾರೆಗಳನ್ನು ನಿರಂತರವಾಗಿ ಕಾಡುವ ಗ್ರಹಣಗಳು. ಈ  ತಾರೆಗಳು ತಾವೇ ಸೃಷ್ಟಿಸಿಕೊಂಡಿರುವ ಭ್ರಾಮಕ ಜಗತ್ತಿನಿಂದ ಹೊರಬಂದು, ಎಲ್ಲಾ ಪೂರ್ವಾಗ್ರಹಗಳಿಂದ ಮುಕ್ತರಾಗಿ, ವಸ್ತುನಿಷ್ಟವಾದ ಸುಂದರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗಿದೆ.

ನಟ, ನಟಿಯರ ಗಳಿಕೆ, ವೃತ್ತಿ ಜೀವನ ಬೇರೆಲ್ಲರಿಗಿಂತ ತೀರಾ ಅನಿಶ್ಚಿತ. ಹಾಗಾಗಿ ಕೈನಡೆಯುತ್ತಿರುವಾಗ ಆದಷ್ಟೂ ಹಣ ಉಳಿಸಿಕೊಳ್ಳಬೇಕು. ಹೀಗಾದಾಗ ತೀರಾ ವಯಸ್ಸಾಗಿ, ಆರೋಗ್ಯವೂ ಕೈಕೊಟ್ಟಾಗ ನೆರವಿಗಾಗಿ ಸರಕಾರದ ಮುಖ ನೋಡುವುದು ತಪ್ಪುತ್ತದೆ. ನಾಡು ನುಡಿಯನ್ನು ಉಳಿಸಿ, ಬೆಳೆಸಿರುವ ಸಾಹಿತಿ,ಕಲಾವಿದರ ಸಂಕಟ ಕಾಲದಲ್ಲಿ ಅವರನ್ನು ಸಲಹಬೇಕಾಗಿದ್ದು ಸರಕಾರಗಳ ಕರ್ತವ್ಯವೇ ಆದರೂ, ನೂರಾರು ಕೆಂಪು ಪಟ್ಟಿಗಳನ್ನು ದಾಟಿಕೊಂಡು ಸಹಾಯ ಹರಿದು ಬರುವುದರೊಳಗಾಗಿ ಕಾಲ ಮಿಂಚಿ ಹೋಗಿರುತ್ತದೆ.

ಕಲಾವಿದರ ಸಂಘಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಪ್ರತಿ ತಿಂಗಳು ಕಡ್ಡಾಯವಾಗಿ ಕಲಾವಿದರಿಂದ ವಂತಿಗೆಯನ್ನು ಪಡೆದು, ಅ ಹಣವನ್ನು ಅವರ ಆಪತ್ಕಾಲದಲ್ಲಿ ಬಡ್ಡಿ ಸಮೇತವಾಗಿ ಹಿಂತಿರುಗಿಸುವ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ, ಕಲಾವಿದರ ಬದುಕಿನಲ್ಲಿ ಹಠಾತ್ತಾಗಿ ಎರಗುವ ವಿಪತ್ತುಗಳಿಂದ ಅವರನ್ನು ಪಾರುಮಾಡಬಹುದು. ಒಟ್ಟಿನಲ್ಲಿ ಹೇಗಾದರೂ ಸರಿ, ತಮ್ಮ ಇಡೀ ಬದುಕನ್ನು ಇತರರ ಮನರಂಜನೆಗಾಗಿಯೇ ಸವೆಸುವ ಕಲಾ ತೋಟದ ಈ ಅಮೂಲ್ಯ ಕುಸುಮಗಳು ತಮ್ಮ ಬಾಳ ಇಳಿ ಸಂಜೆಯಲ್ಲಿ ನೋವಿನಿಂದ ಕಣ್ಣೀರಿಡದಂತೆ, ವೇದನೆಯಿಂದ ಬಿಸುಸುಯ್ಯದಂತೆ ಕಾಪಾಡುವ ಹೊಣೆ ಹೃದಯವಂತ ನಾಗರೀಕ ಸಮಾಜದ ಹೆಗಲ ಮೇಲಿದೆ. ಇದು ಮೊದಲ ಆದ್ಯತೆಯೂ ಆಗಬೇಕು.

(ಫೆಬ್ರುವರಿ.೨೦೦೩)

****

ಕಾಯಿಸುವ ಹುಡುಗರನು ಯಾರೂ ಪ್ರೀತಿಸಬಾರದು

ಈ ಪ್ರಪಂಚದಲ್ಲಿ ಯಾರುಯಾರಿಗೋ, ಎಷ್ಟೆಷ್ಟೋ ವಿಧದ ಕಷ್ಟಗಳಿರಬಹುದು.  ಇದು ಅಂತಹ ದೊಡ್ಡ ಕಷ್ಟವೇನೂ ಅಲ್ಲ.  ಆದರೆ ಕಷ್ಟ ಎಂದು ಹೇಳಲೂ ಆಗದಂತಹ, ಅನುಭವಿಸಲೂ ಆಗದಂತಹ ಬಿಸಿತುಪ್ಪದಂತಹ ಕಷ್ಟ.  ಅದು ಕಾಯುವ ಕಷ್ಟ.  ಗಡಿಯಾರದ ಮುಳ್ಳುಗಳು ಮುಂದೆ ಸರಿಯುವುದನ್ನೇ ನೋಡುತ್ತಾ, ಕಾಯುವುದು ಮತ್ತು ಸಾಯುವುದು ಎರಡೂ ಒಂದೇ ಎಂಬ ಮಾತು ಅತಿಶಯೋಕ್ತಿ ಅನ್ನಿಸಿದರೂ, ಯಾರನ್ನಾದರೂ, ಯಾವುದಕ್ಕಾದರೂ ಬಹಳ ಹೊತ್ತು ಕಾಯುವಾಗ ಹಾಗನ್ನಿಸುವುದು ಮಾತ್ರ ಪೂರ್ತಿ ಸುಳ್ಳೇನಲ್ಲ!

ಕಾಯುವಿಕೆಯ ಅನುಭವವೇ ನನಗೆ ಈವರೆಗೆ ಆಗಿಲ್ಲ ಎಂದು ಯಾರೊಬ್ಬರೂ ಎದೆತಟ್ಟಿಕೊಂಡು ಹೇಳುವಂತಿಲ್ಲ.  ಮನದಾಳದ ಭಾವನೆಗಳನ್ನೆಲ್ಲ ಮೊಗೆದು, ಬರೆದು ಕೊಟ್ಟಿರುವ ಮೊದಲ ಪ್ರೇಮಪತ್ರಕ್ಕೆ ಅವಳಿಂದ ಬರುವ ಪ್ರತ್ಯುತ್ತರಕ್ಕಾಗಿ ಕಾಯುವ ಪ್ರೇಮಿ,  ಪರೀಕ್ಷೆ ಮುಗಿದಿದ್ದು ಫಲಿತಾಂಶಕ್ಕಾಗಿ ಎದುರು ನೋಡುವ ವಿದ್ಯಾರ್ಥಿ,  ಮಗನಿಂದ ಬರುವ ಮೂರು ಸಾಲಿನ ಪತ್ರಕ್ಕಾಗಿ ಕಾದು ಕೂತಿರುವ ಮುದಿ ತಂದೆ, ನವಮಾಸದಿಂದ ಬಸಿರಲ್ಲಿ ಮಿಸುಕುತ್ತಿರುವ ಹಸುಕಂದನನ್ನು ಕಾಣಲು ಕಾತರಿಸುವ ತಾಯಿ,  ತಡವಾದ ವಿಮಾನದಿಂದಾಗಿ ಪರದೇಶದಲ್ಲಿ ಪರಿತಪಿಸುವ ಪ್ರವಾಸಿ, ಮೊದಲ ಬರಹಕ್ಕೆ ಓದುಗನ ಪ್ರತಿಕ್ರಿಯೆಗಾಗಿ ನಿರೀಕ್ಷಿಸುವ ಲೇಖಕ, ವರ್ಷಗಳ ಶ್ರಮ, ಶ್ರದ್ಧೆ, ಕೈಯಲ್ಲಿದ್ದ ಹಣ ಎಲ್ಲವನ್ನೂ ಧಾರೆಯೆರೆದು ಚಿತ್ರವೊಂದನ್ನು ತೆರೆಗಿತ್ತು, ಪ್ರೇಕ್ಷಕ ಪ್ರಭುವಿನ ಕೃಪೆಗಾಗಿ ಕಾಯುವ ನಿರ್ಮಾಪಕ, ಮತದಾನ ಮುಗಿದಿದ್ದು, ಮತ ಎಣಿಕೆಗಾಗಿ ಕ್ಷಣಗಣನೆ ಮಾಡುತ್ತಿರುವ ರಾಜಕಾರಣಿ….ಹೀಗೆ ಯಾವುದೋ ಒಂದು ಸಂದರ್ಭದಲ್ಲಿ ಕಾಯುತ್ತಾ ಕೂತುಕೊಳ್ಳುವ, ಕಾಯುತ್ತಾ ಕಾಯುತ್ತಾ ಕ್ಷಣವೊಂದು ಯುಗವಾಗಿ ಹೋಗುವ ಈ ಅನುಭವವಿಲ್ಲದವರು ಯಾರಾದರೂ ಇದ್ದಾರೆಯೇ?

ಕಾಯಿಸುವುದು ಅಂದರೆ ಬೆಂಕಿಯ ಮುಂದೆ ಯಾವುದಾದರೂ ವಸ್ತುವನ್ನು ಹಿಡಿದು ಬಿಸಿ ಮಾಡುವುದು ಎಂಬುದು ಸಾಮಾನ್ಯ ಅರ್ಥ.  ನಿರೀಕ್ಷೆಗೂ ಕೂಡ ಕಾಯುವುದು, ಕಾಯಿಸುವುದು ಎಂಬ ಪದವೇ ಬಳಕೆಯಲ್ಲಿರುವುದು ಆಶ್ಚರ್ಯದ ವಿಚಾರ.  ಬಹುಶ: ಯಾರನ್ನಾದರೂ ಕಾಯುವವರು, ಬೆಂಕಿಯ ಮೇಲೆ ನಿಂತಂತೆ ಚಡಪಡಿಸುವುದರಿಂದ ಆ ಪದ ಚಾಲ್ತಿಗೆ ಬಂದಿದ್ದರೂ ಬಂದಿರಬಹುದೇನೊ.  ಇದನ್ನು ತಿಳಿದವರೇ ಹೇಳಬೇಕು.  ಸಾಮಾನ್ಯವಾಗಿ ಹೆಂಗಸರು ಕಾಯಿಸುತ್ತಾರೆ, ಅದರಲ್ಲೂ ಹೊರಗೆಲ್ಲಾದರೂ ಹೋಗುವಾಗ ತಯಾರಾಗಲೂ ಬಹಳ ಸಮಯ ತೆಗೆದುಕೊಂಡು ಗಂಡಸರ ಸಹನೆಯನ್ನು ಪರೀಕ್ಷಿಸುತ್ತಾರೆ ಎಂಬುದೊಂದು ಬಹಳ ಜನಪ್ರಿಯವಾದ ಆರೋಪ.  ಆದರೆ ಈ ಕಾಯಿಸುವಿಕೆಗೆ ಗಂಡು, ಹೆಣ್ಣೆಂಬ ಬೇಧಭಾವವೇನೂ ಇದ್ದ ಹಾಗಿಲ್ಲ. ಈ ಕಾಯಿಸುವುದು, ಸತಾಯಿಸುವುದು ಯಾರಿಗಾದರೂ ಬರಬಹುದಾದ, ಯಾರಲ್ಲೂ ಇರಬಹುದಾದ ಒಂದು ಕಾಯಿಲೆ.  ಸಮಾರಂಭಗಳಲ್ಲಿ ಸ್ವಲ್ಪ ತಡ ಮಾಡಿ ಬರುವುದರಿಂದ ಮುಖ್ಯ ಅತಿಥಿಗಳ ಗೌರವ ಹೆಚ್ಚುತ್ತದೆ ಎಂಬ ಭ್ರಮೆ ಹಿಂದಿತ್ತು. ಈಗ ಅಷ್ಟಿಲ್ಲ.  ಈಗ ಸಮಯವನ್ನು ಸರಿಯಾಗಿ ಪರಿಪಾಲಿಸದ ಅತಿಥಿ ಬರುವ ಮೊದಲೇ ಕಾರ್ಯಕ್ರಮವನ್ನು ಪ್ರಾರಂಭಿಸಿ, ಮುಖ್ಯ ಅತಿಥಿಯೇ ಮುಖಭಂಗಕ್ಕೊಳಗಾಗಿರುವ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ.

ಇದು ವೇಗದ ಯುಗ.  ಕಾಯಲು ಈಗ ಯಾರೊಬ್ಬರೂ ಸಿದ್ಧರಿಲ್ಲ.  ಸದಾ ಕಾಲ ಅವಸರ, ಧಾವಂತಗಳ ನಡುವೆ ಮುಗ್ಗರಿಸಿದರೂ ಸರಿಯೇ,  ಓಟ ನಿಲ್ಲುವಂತಿಲ್ಲ ಎನ್ನುವ ಕಾಲ ಇದು.  ಬಯಸಿದ್ದೆಲ್ಲಾ ಮರುಕ್ಷಣವೇ ಕೈಗೆ ಎಟುಕಿಬಿಡಬೇಕು ಎಂದು ಆತುರಪಡುವ ಈ ಲೋಕದಲ್ಲಿ  ತಾಳ್ಮೆ, ಸಹನೆ ಎಂಬ ಸವಕಲು ಪದಗಳಿಗೀಗ ಜಾಗವಿಲ್ಲ.  ಇದು ಯಾರೊಬ್ಬರದೂ ತಪ್ಪಲ್ಲ.  ಅನುಕ್ಷಣ ಸವಾಲು, ಸ್ಪರ್ಧೆಗಳ ನಡುವೆಯೇ ಬದುಕುವ ನಾವು ಸ್ವಲ್ಪ ಕಾದು ನೋಡೋಣ ಎಂದು ನಿಧಾನಿಸಿದರೂ ಆ ಅವಕಾಶ ಮತ್ತಾರದೋ ಪಾಲಾಗಿ ಹೋಗಿರುತ್ತದೆ.  ಹಾಲು ಕಾದಷ್ಟೂ ರುಚಿ ಹೆಚ್ಚು ಎಂದು ಕಾಯುತ್ತಾ ಕುಳಿತರೆ ಕೆನೆಯೂ ಇಲ್ಲ, ಹಾಲೂ ಇಲ್ಲ ಅನ್ನುವಂತಹ ಪರಿಸ್ಥಿತಿ ತಪ್ಪಿದ್ದಲ್ಲ.

ಆದರೆ ಓಟದ, ವೇಗದ ಗುಲಾಮರಾಗಿ ಹೋಗಿರುವ ನಮ್ಮ ಬೆನ್ನ ಹಿಂದೆ, ಹೀಗೆ ಕಾಯುತ್ತಾ, ಕಾಯುತ್ತಾ ಕುಳಿತಲ್ಲೇ ಕಲ್ಲಾಗಿ ಹೋದವರ ದೊಡ್ಡದೊಂದು ಪರಂಪರೆಯೇ ಇದೆ.  ಪ್ರಿಯಕರನಿಗಾಗಿ ಜನ್ಮಜನ್ಮಾಂತರಗಳವರೆಗೆ ಕಾದುಕುಳಿತ ಮಹಾಶ್ವೇತೆ, ಲಕ್ಷ್ಮಣನ ಬರವಿಗಾಗಿ ಕಾಯುತ್ತಾ, ಅವನ ಸವಿನೆನಪಿನಲ್ಲಿಯೇ ಅನೇಕ ದಿನರಾತ್ರಿಗಳನ್ನು ಕಳೆದುಬಿಟ್ಟ ಊರ್ಮಿಳೆ, ರಾಮನು ಬರಲಿಲ್ಲ, ಏಕೆ? ಎಂದು ಕಣ್ಣೀರುಗರೆಯುತ್ತಾ ಕಲ್ಲಾಗಿ ಕಾದು ಕುಳಿತ ಅಹಲ್ಯೆ, ಬೃಂದಾವನದ ನಂದನದಲ್ಲಿ ಕೃಷ್ಣನಿಗಾಗಿ ಕಾದ ರಾಧೆ, ತಪಸ್ಸಿಗೆ ಕುಳಿತು ಮೈಮೇಲೆ ಹುತ್ತ ಬೆಳೆದು, ಹಾವುಗಳೇ ಹರಿದಾಡಿದರೂ, ಬಾರದ ದೇವತೆಗಳಿಗಾಗಿ, ಅವರು ದಯಪಾಲಿಸಲಿರುವ ವರಗಳಿಗಾಗಿ ಕಾದುಕುಳಿತ ಋಷಿಮುನಿಗಳು…..ಒಬ್ಬರಿಗಿಂತ ಒಬ್ಬರು ಕಾಯುವುದರಲ್ಲಿ ಬೃಹತ್ ದಾಖಲೆಗಳನ್ನೇ ನಿರ್ಮಿಸಿದವರು!

ಈ ಕಾಯುವಿಕೆಗೂ ನೋಬಲ್ ತರಹದ ಒಂದು ಮಹಾನ್ ಪ್ರಶಸ್ತಿಯೇನಾದರೂ ಇದ್ದಿದ್ದರೆ, ಅದು ಸಿಗುತ್ತಿದ್ದುದು ಬೇರಾರಿಗೂ ಅಲ್ಲ. ಖಂಡಿತವಾಗಿಯೂ ಅದು ಕಾಯುವಿಕೆಯಲ್ಲಿ ಡಾಕ್ಟರೇಟ್ ಪದವಿಗಳಿಸಿಕೊಂಡಿರುವ ನಮ್ಮ ಶಬರಿ ಅಜ್ಜಿಯ ಪಾಲಾಗಿರುತ್ತಿತ್ತು.  ಶಬರಿ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಬೂರುಗದ ಹತ್ತಿಯಂತೆ ಬೆಳ್ಳಗಾಗಿರುವ ತಲೆಕೂದಲಿನ, ಸುಕ್ಕು ಬಿದ್ದ ಮೈಯ, ಹಣ್ಣು ಹಣ್ಣು ಮುದುಕಿಯ ಮುಖ.  ಬಹುಶ: ರಾಮನನ್ನು ಕಾಯಲು ಕುಳಿತ ಮೊದಲ ದಿನಗಳಲ್ಲಿ ಅವಳು ಹಾಗಿರಲಿಲ್ಲ.  ಆಗ ಆಕೆಗಿನ್ನೂ ತುಂಬುಯೌವನವೇ ಇತ್ತೇನೋ.  ಬಂದೇ ಬರುತಾನೆ ರಾಮ ಎಂದು ದಿನದಿನವೂ ಕಾದು, ಅವಳ ಕಣ್ಣು ಮಂಜಾಗಿ, ಕಿವಿ ಮಂದವಾಗಿ, ರಾಮ ಅಲ್ಲಿಗೆ ಬರುವ ವೇಳೆಗೆ ಅವಳು ಆ ರೀತಿಯಾದ ಜೀರ್ಣಾವಸ್ಥೆಗೆ ಬಂದು ತಲುಪಿರಬಹುದು.

ಹಾಗೆ ನೋಡಿದರೆ, ಯಾರ ಮಾತನ್ನೂ ಕೇಳದೆ, ರಾಮನ ಹಿಂದೆ ಹಟ ಹಿಡಿದು ಹೋದ ಸೀತೆ ಬಹಳ ಜಾಣೆ.  ಒಂದಲ್ಲ, ಎರಡಲ್ಲ ಹದಿನಾಲ್ಕು ವರ್ಷ ರಾಮನಿಲ್ಲದೆ ವಿರಹಪಡುವ, “ನೀನಿಲ್ಲದಿರುವಾಗ ನಲ್ಲ, ಒಬ್ಬಂಟಿ ನಾನು ಮನೆಯಲ್ಲಿ” ಎಂದು ಕಾಯುತ್ತಾ ಕುಳಿತುಕೊಳ್ಳುವ ಅಸಹನೀಯ ವೇದನೆಯ ಅಂದಾಜು ಆಕೆಗೆ ಮೊದಲೇ ಇತ್ತು!  ಅರಣ್ಯದಲ್ಲಿ ಹಗಲಿರುಳು ಕಾಡುವ ರಾಕ್ಷಸರು,  ಕಷ್ಟ,ನಷ್ಟಗಳ ಬಗೆಗೆ ಅವಳಿಗೆ ತಿಳಿದಿದ್ದರೂ  ರಾಮನಂತಹ ಸಹೃದಯಿ,ಸರಸಿಯಾದ ಸ್ನೇಹಿತನೊಡನೆ ವನವಾಸ ಕೂಡ ಹಿತವೇ ಎಂದು ಅವಳಿಗನ್ನಿಸಿರಬಹುದು.  ಅರಮನೆಯಲ್ಲಿದ್ದ ಸುಖವೈಭೋಗಗಳು, ಮೃಷ್ಟಾನ್ನ, ತೂಗುಮಂಚ…ಯಾವುದೂ ಅಲ್ಲಿರದಿದ್ದರೂ,  ಬಾಳು ಸುಂದರವೆನಿಸುವಂತೆ ಮಾಡಬಲ್ಲ ಒಲಿದ ಜೀವವೊಂದು ಅವಳ ಜೊತೆಯಲ್ಲಿತ್ತಲ್ಲ! ಅದಕ್ಕಿಂತ ಮಿಗಿಲಾದುದು ಇನ್ನೇನಿದೆ?

ರಾಮಾಯಣದ ಊರ್ಮಿಳೆಯ ಮಾತು ಹಾಗಿರಲಿ, ಈಗಲೂ ಕೆಲವು ಊರ್ಮಿಳೆಯರು ಕಾಯುತ್ತಿದ್ದಾರಂತೆ. ಆದರೆ ಅವರ ಲಕ್ಷ್ಮಣರು ರಾಮನೊಡನೆ ವನವಾಸಕ್ಕೆ ಹೋದವರಲ್ಲ, ಸೈನ್ಯದೊಡನೆ ಸಮರಕ್ಕೆಂದು ಹೋಗಿ ಶತೃದೇಶದಲ್ಲಿ ಸೆರೆವಾಸದಲ್ಲಿರುವವರು.  ಆ ಯೋಧರ ಪತ್ನಿಯರು, ಹಾಳಾಗಿರುವ ಮನೆಗಳನ್ನು ದುರಸ್ತಿ ಮಾಡಿಸಿದರೆ, ಎಲ್ಲಿ ತಮ್ಮ ಗಂಡಂದಿರಿಗೆ ಮನೆಯ ಗುರುತೇ ಸಿಗದೆ ನಿರಾಶರಾಗಿ ಹಿಂತಿರುಗಿ ಹೋಗಿಬಿಡುತ್ತಾರೋ ಎಂದು ಮುರಿದ ಮನೆ, ಮನಸ್ಸುಗಳೊಡನೆ ಇವತ್ತಿಗೂ ಕಾಯುತ್ತಿದ್ದಾರಂತೆ.  ಇದು ಯಾವ ತಪಸ್ಸಿಗೂ ಕಡಿಮೆ ಇಲ್ಲದಂತಹ ಮಹಾನಿರೀಕ್ಷೆ.  ಅವರ ತಪಸ್ಸು ಬೇಗ ಕೈಗೂಡಲಿ.  ಮನೆಗಳಿಗೆ ಮನೆಯೊಡೆಯರು ಮರಳಿ ಬರಲಿ!

ಕಾಯುವುದು ಕಷ್ಟ. ಅದರಲ್ಲೂ ಕಾಯುವಿಕೊಂದು ಪ್ರತಿಫಲದ ನಿರೀಕ್ಷೆಯೇ ಇಲ್ಲದೆ ಕಾಯುವುದಂತೂ ಇನ್ನೂ ಕಷ್ಟ.  ಆ ಪ್ರತಿಫಲ ಬಂದರೂ ಅದು ತೀರಾ ತಡವಾಗಿ ಬಂದರೆ, ಮರಣೋತ್ತರ ಪ್ರಶಸ್ತಿಗಳಂತೆಯೇ ಅದೂ ವ್ಯರ್ಥವೇ.  “ಒಣಗಲ್ ಪೈರಿಗೆ ಬಾರದಿರ್ದ ಮಳೆ ಬಂದೇನದು?” – ಎಂದು ಕವಿ ಸೋಮೇಶ್ವರ ತನ್ನ ಶತಕದಲ್ಲಿ ಗುಡುಗಿದ್ದು, ಹೀಗೆ ಕಾದು ಬೇಸತ್ತ ನಂತರವೇ ಇರಬಹುದು.  “ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಈಗಲೇ ಬರಲಿ” ಎಂದು ಜವರಾಯನನ್ನೂ ಧಾವಂತ ಪಡಿಸುವ ವಚನಕಾರರು ಇನ್ನು ಬೇರೆ ಯಾರಿಗಾದರೂ ಯಾಕಾಗಿ ಕಾದಾರು?  “ಕಾಯಲಾರೆನೋ ಕೃಷ್ಣಾ.. ಕಂಡವರ ಬಾಗಿಲನು” ಎನ್ನುತ್ತಾ ಮೊದಲೇ ತಾಳ್ಮೆಗೆಟ್ಟಿರುವ ಹರಿದಾಸರ ಸಹನೆಯನ್ನು ಕೆಣಕುವ ಸಾಹಸಕ್ಕೆ ಹೋಗದಿರುವುದೇ ಕ್ಷೇಮ!

ಕಾಯುವುದು ಪ್ರೇಮಿಗಳ ಹಣೆಗಂಟಿದ ಕರ್ಮ.  ಈ ಪ್ರೇಮ ಎಂತಹ ಅರಸಿಕನನ್ನೂ ಕವಿಯಾಗಿ ಮಾಡುತ್ತದೆಯಂತೆ.  ನಮ್ಮ ಅಮರ ಮಧುರ ಪ್ರೇಮಗೀತೆಗಳೆಲ್ಲ ಈ ಕಾಯುವಿಕೆಯ ಬೆಂಕಿಯಲ್ಲಿ ಅರಳಿದ ಹೂವುಗಳೇ.  ಉರ್ದು, ಹಿಂದಿ ಕವಿಗಳಂತೂ ಪ್ರೇಮದ ಅಮಲಿನಲ್ಲಿ ಮುಳುಗಿ ಹುಚ್ಚರಾಗಿ ಹೋದವರು.  ಇಂತಹ ವಿಷಯದಲ್ಲಿ ಅವರು ನಮ್ಮ ಕನ್ನಡ ಕವಿಗಳಿಗಿಂತ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ರಸಿಕರು. “ಗುಲ್ ಹೈ, ಗುಲ್‍ಶನ್ ಹೈ, ಮೌಸುಮ್-ಎ-ಬಹಾರ್ ಹೈ, ಸಬ್ ಹೈ, ಮಗರ್ ಮುಜಕೊ ತೇರಾ ಇಂತೆಜಾರ್ ಹೈ…” – ಎಂದು ಪ್ರೇಯಸಿಯ ಹೆಜ್ಜೆ ಸಪ್ಪಳಕ್ಕಾಗಿ ಕಾದು ಹೈರಾಣವಾಗಿ ಹೋದವರು.   ಪ್ರೇಮದ ಬೆಲೆಯನ್ನು ಅವರು ಚೆನ್ನಾಗಿ ಅರಿತವರಾದ್ದರಿಂದ, ಕಾಯುವುದು ಅವರಿಗೊಂದು ಕಷ್ಟದ ಕೆಲಸ ಎಂದು ಅನ್ನಿಸದೆ ಇರಬಹುದು.  ಈ ಯುಗ ಉರುಳಿ, ಯುಗ ಮರಳಿ, ಪ್ರತಿ ಜನುಮದಲ್ಲೂ ಕಾಯಲು ಅವರು ತಯಾರು. ಅಷ್ಟು ಮಾತ್ರ ಏಕೆ?  “ಖುದಾ ಕರೆ ಕೆ ಕಯಾಮತ್ ಹೋ, ಔರ್ ತೂ ಆಯೆ..” ಎನ್ನುತ್ತಾ ಕೊನೆಯುಸಿರು ದೇಹದಿಂದ ಹೊರಹೋಗುವರೆಗೂ ಉತ್ಕಟವಾಗಿ ಕಾಯುವುದು ಮತ್ತಾರಿಂದ ತಾನೇ ಸಾಧ್ಯ? ಈ ಗುಲಾಬಿ ಹೃದಯದ ಕವಿಗಳಿಂದಲ್ಲದೆ!

ಕಾಯುವುದು ಸಮ್ಮತ, ಸರಿ. ಆದರೆ ಎಲ್ಲಿಯವರೆಗೆ ಅಂದರೆ, “ಕಾಯಿಸಿದರೂ, ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ” –  ಎಂಬ ಉಗುರು ಬೆಚ್ಚಗಿನ ಸಾಂತ್ವನದ ಭರವಸೆ ಇದ್ದಾಗ ಮಾತ್ರ!  ಅದೇ ಇಲ್ಲದಿದ್ದರೆ “ನಿನ್ನ ದಾರಿಯೇ ಬೇರೆ, ನನ್ನ ಗುರಿಯೇ ಬೇರೆ” ಎಂದು ಕೊಡವಿಕೊಂಡು ಎದ್ದು ಹೋಗುವುದೇ ನ್ಯಾಯ. ಸರಿ ತಾನೇ?

(ಡಿಸೆಂಬರ್.೨೦೦೪) 

*       *       *    *      *       *