ಪೇಪರ್ ರಂಪ ನೀವೇನು ಮಾಡ್ತೀರಿ?

ಅಮೆರಿಕದಲ್ಲಿ ಎಲ್ಲವೂ ಹೆಚ್ಚು. ಉಟಾನೇ ಬೇಡ ಅಂತ ಒಂದು ಲೋಟ ಹಾಲು ಕುಡಿದರೂ ಹಾಲಿನಲ್ಲೂ ಸಮೃದ್ಧಿಯಾಗಿರುವ ಪೌಷ್ಟಿಕಾಂಶಗಳಿಂದ ಮೈಗೆ ಸೇರುವ ಕೊಬ್ಬು ಹೆಚ್ಚು. ಅದೇ ತರ ಇಲ್ಲಿ ಪೇಪರ್ ರಂಪವೂ ಹೆಚ್ಚು! ಪೇಪರ್ ರಂಪ ಅಂದರೆ ಗೊತ್ತಾಗಲಿಲ್ವಾ? ನಿಮ್ಮನೆಯಲ್ಲಿ ಬಂದು ಬಿದ್ದು ಚೆಲ್ಲಾಡಿಹೋಗುವ ಪೇಪರ್, ಬಿಲ್, broucureಗಳು ….ಮುಂತಾದ ಕಾಗದ ಸಂಬಂಧೀ ಕಸ.

ಇಲ್ಲಿ ಪತ್ರಿಕೆ ಹಂಚುವವರು ಬಹಳ ಉದಾರಿಗಳು. ನಾವೇನೂ ಕೇಳದಿದ್ದರೂ ಅವರಾಗಿಯೇ ಧರ್ಮಾರ್ಥ ಎಸೆದುಹೋಗಿರುತ್ತಾರೆ. ಆಮೇಲೆ ಬಿಲ್ ಕಳಿಸುತ್ತಾರೆ ಆ ಮಾತು ಬೇರೆ. ನಾನು ಹೇಳಲುಹೊರಟಿದ್ದು ಪೇಪರ್ ಬಗ್ಗೆ ಅಲ್ಲ, ಪೇಪರ್ ಓದಿ ಮುಗಿಸಿ ರಿಸೈಕಲ್‍ಗೆ ಹಾಕಿಬಿಡುವುದರಿಂದ ಅದೇನೂ ಮನೆಯ ರಂಪಕ್ಕೆ ಸೇರದು.

ಈ ಪೇಪರ್ ಕಸಗಳು ಉಪಯುಕ್ತವೆಂದು ಸಂಗ್ರಹಿಸಿಟ್ಟುಕೊಂಡರೆ ದೊಡ್ಡ ಕಸದ ಹೊರೆ, ಬಿಸಾಕಿದರೆ ಯಾವಾಗ ಬೇಕಾಗಬಹುದೋ ಏನೋ ಎಂದು ಹೆದರಿಸುವ ಮಾದರಿಯವು. ಉದಾಹರಣೆಗೆ – ಪ್ರತಿಬಾರಿ ವಿಮಾ ಕಂಪನಿ ಬದಲಾದಾಗ ಅದರ ಜೊತೆ ಬರುವ ಹೊರೆ ಗಾತ್ರದ ಕೈಪಿಡಿ – ನಾನಂತೂ ಈವರೆಗೆ ಎಂದೂ ಅದನ್ನು ತೆರೆದು ಓದಿಲ್ಲ. ಕ್ರೆಡಿಟ್ ಕಾರ್ಡುಗಳ ಆಗಾಗ ಬದಲಾಗುವ ನೀತಿ-ನಿಯಮಗಳು, ಅಂಗಡಿಯಲ್ಲಿ ಕೊಂಡ ಪದಾರ್ಥಗಳ ಬಿಲ್, ವಾರಂಟಿ….ಮುಂತಾದವು.

ನಾವು ಅಮೆರಿಕಕ್ಕೆ ಬಂದಾಗಿನಿಂದ ನಮ್ಮ ಮನೆಯ ಗ್ಯಾಸಿನ, ಕರೆಂಟಿನ ಬಿಲ್ಲುಗಳು, ಬ್ಯಾಂಕ್, ಕ್ರೆಡಿಟ್ ಕಾರ್ಡ್ ಸ್ಟೇಟ್‍ಮೆಂಟ್ಸ್, ಮರಳಿ ಬಂದ (bounce ಅಲ್ಲ – canceled ) ಚೆಕ್ಕುಗಳು …ಇವತ್ತಿಗೂ ನಮ್ಮಲ್ಲಿ ಭದ್ರವಾಗಿವೆ. ಈಚೆಗೆ ಸಾಧ್ಯವಿರುವುದನ್ನೆಲ್ಲಾ ಪೇಪರ್ ಲೆಸ್ ಮಾಡಿದ್ದರೂ ಕೆಲವು ಅನಿವಾರ್ಯಗಳು ಬಂದು ವಕ್ಕರಿಸುತ್ತಲೇ ಇರುತ್ತವೆ.

ಈ ಪೇಪರ್ ದೈತ್ಯನನ್ನು ಚಾಮುಂಡಿಯಂತೆ ಸಂಹಾರ ಮಾಡಿ, ಒಂದೊಂದೇ ಪೇಪರನ್ನು shredder ಯಂತ್ರಕ್ಕೆ ತುಂಬಿಸಿ, ಕತ್ತರಿಸುವ ಮಹದಾಸೆ ನನಗೆ. ಶ್ರೀನಿ ಕೇಳಬೇಕಲ್ಲ, – “ನಾವು ಎಷ್ಟೆಂದರೂ ಹೊರಗಿನಿಂದ ಬಂದವರು. ಇಮಿಗ್ರೆಂಟ್ಸ್. ಯಾವಾಗ ಯಾವ ದಾಖಲೆ ಕೇಳಿದರೂ ತೋರಿಸಬೇಕಾಗತ್ತೆ.” ಎನ್ನುವ ದೂರಾಲೋಚನೆ ಅವರದು. ಮಧ್ಯಮವರ್ಗದ ಅತಿ ಭಯಸ್ಥ ಮನೋಭಾವ ಅಂತ ನನ್ನ ಕಾಮೆಂಟ್ 🙂

ಈ ಬಿಲ್, ಬ್ಯಾಂಕ್ ಸ್ಟೇಟ್‍ಮೆಂಟ್ಸ್ ಇತ್ಯಾದಿ ಪೇಪರ್ ರಾಕ್ಷಸರನ್ನು ನೀವೇನು ಮಾಡ್ತೀರಿ? ಎಷ್ಟು ದಿನ ಅವುಗಳನ್ನು ಜೋಪಾನ ಮಾಡಬೇಕು? ಎಂಬ ಪ್ರಶ್ನೆಯನ್ನು ಅನೇಕರಲ್ಲಿ ಕೇಳಿದ್ದೇನೆ. ಒಬ್ಬೊಬ್ಬರದು ಒಂದೊಂದು ಉತ್ತರ. ಕೆಲವರು ಹತ್ತು ವರ್ಷ ಜೋಪಾನ ಮಾಡಬೇಕು ಎಂದು ಹೆದರಿಸಿದರೆ, ಇನ್ನೂ ಕೆಲವರು ಮೂರು ತಿಂಗಳ ನಂತರ ಬಿಸಾಕಬಹುದು ಎಂದಿದ್ದಾರೆ. ನನಗಂತೂ ಸಮಾಧಾನವಾಗಿಲ್ಲ. ಯಾರಾದರೂ ನನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಿದ್ದೇ ಆದಲ್ಲಿ, ಒಂದಾನೊಂದು ಕಾಲದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ.ಗುಂಡೂರಾವ್ ಮಾಡಿದಂತೆ ನಾನೂ ಶುರು ಮಾಡಿಬಿಡುತ್ತೇನೆ ಕಡತ ಯಜ್ಞ!! ಹಹಹ!!

***

6 thoughts on “ಪೇಪರ್ ರಂಪ ನೀವೇನು ಮಾಡ್ತೀರಿ?”

 1. ಕಡತ ಯಜ್ಞ ಶುರು ಮಾಡೋದೇನೋ ಸುಲಭ. ಪೇಪರ್ ಶ್ರೆಡ್ಡರಿಗೆ ಊಟ ಕೊಡುವ ಕೆಲಸದ ಮೇಲೆ ಒಂದು ಜೋಕ್ ಇದೆ, ಹೇಳಲಾ?

  ಒಮ್ಮೆ ಒಂದು ಕಂಪೆನಿಯ ಯಜಮಾನ ಶ್ರೆಡ್ಡರ್ ಮುಂದೆ ಒಂದು ಪೇಪರ್ ಹಿಡಿದು ನಿಂತಿದ್ದ. ಅವನ ಸೆಕ್ರೆಟರಿ ಅಂದು ಬೇಗನೇ ಮನೆಗೆ ಹೋಗಿದ್ದಳು. ಒಬ್ಬಾನೊಬ್ಬ ಕೆಲಸಗಾರ ಅದೇ ದಾರಿಯಲ್ಲಿ ತನ್ನ ಮನೆ ಕಡೆ ಹೊರಟವ ಇವರನ್ನು ನೋಡಿ ಅತ್ತ ಬಂದ. ಈ ದೊಡ್ಡ ಮನುಷ್ಯ, “ಈ ಮೆಷೀನನ್ನು ಹೇಗೆ ಸ್ಟಾರ್ಟ್ ಮಾಡೋದೋ ಗೊತ್ತಿಲ್ಲ, ನಿನಗೇನಾದ್ರೂ ಗೊತ್ತಾ?” ಅಂದ. ಇವನೋ ತಾನೇ ಸ್ಮಾರ್ಟ್ ಅನ್ನುವಂತೆ, ಆ ಕಾಗದ ತೆಗೆದುಕೊಂಡು ಅದನ್ನು ಶ್ರೆಡ್ಡರಿನ ಮುಖಕ್ಕೆ ಹಿಡಿದ. ಕುರ್ರ್… ಅಂತ ಶಬ್ದ ಮಾಡುತ್ತಾ ಅದು ಆ ಪೇಪರನ್ನು ನುಂಗಿತು.
  ಈಗ ಆ ಒಡೆಯ, “ಗುಡ್. ತುಂಬಾ ಮುಖ್ಯ ಕಡತ ಇದು, ಇದರ ಒಂದೆರಡು ಪ್ರತಿ ಬೇಕು, ಮಾಡಿಕೊಡು.”

  ಈ ಬಡಪಾಯಿಯ ಮುಖ, ತಲೆ ಕೆಟ್ಟು ಹೋಯಿತು.

 2. kaaloo says:

  ನೀವು ನಿಮ್ಮ ಪೇಪರುಗಳನ್ನ ಮ್ಯಾನೇಜ್ ಮಾಡ್ದೇ ಹೋದ್ರೆ ಅವುಗಳೇ ನಿಮ್ಮನ್ನು ಮ್ಯಾನೇಜ್ ಮಾಡತೊಡಗುತ್ವೆ, ಹುಷಾರಾಗಿರಿ. ಈ ಕೆಳಗಿನ ಸರಳ ಸೂತ್ರವನ್ನು ನಾನು ಪಾಲಿಸುತ್ತೇನೆ:
  – ಟ್ಯಾಕ್ಸ್‌ಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳು
  – ಒಂದೆರಡು ತಿಂಗಳಿನ ಕ್ರೆಡಿಟ್ ಕಾರ್ಡ್, ಬ್ಯಾಂಕು, ಯುಟಿಲಿಟಿ ಬಿಲ್ಲು (ಫೊನು, ಗ್ಯಾಸ್, ಎಲೆಕ್ಟ್ರಿಸಿಟಿ, ಇತ್ಯಾದಿ)
  – ಇನ್ಸೂರೆನ್ಸ್ (ಹೆಲ್ತ್, ಲೈಫ್, ಕಾರು, ಇತ್ಯಾದಿ) ಗೆ ಸಂಬಂಧಿಸಿದ ಆಯಾ ವರ್ಷದ ಲೆಕ್ಕಚಾರ
  – ಮಾರ್ಟ್‌ಗೇಜ್‌ಗೆ ಸಂಬಂಧಿಸಿದ ಕಡತ, ಕಾಗದ ಪತ್ರಗಳು

  ನಿಮ್ಮ ಕಳೆದ ವರ್ಷಗಳ ವಸತಿ ವಿವರಗಳ ಬಗ್ಗೆ ಕಾಗದ ಪತ್ರಗಳನ್ನು ಇಟ್ಟುಕೊಂಡಿರುವುದು ಇಮಿಗ್ರೇಷನ್ ದೃಷ್ಟಿಯಿಂದ ಒಳ್ಳೆಯದೇ ವಿನಾ ಕ್ಯಾನ್ಸೆಲ್ ಆದ ಚೆಕ್ಕುಗಳನ್ನು ಯಾರೂ ಕೇಳರು – ಅದು ಸೂಕ್ತ ಮೊತ್ತದ ಚೆಕ್ಕಾಗಿದ್ದು ಯಾವುದಾದರೂ ಪರ್ಪಸ್ ಸರ್ವ್ ಮಾಡುವಂತಿದ್ದರೆ ಇದ್ದಿರಲಿ ಬಿಡಿ.

  ಕ್ರೆಡಿಟ್ ಕಾರ್ಡ್‌ನ ಬ್ಯಾಲೆನ್ಸ್ ಹೆಚ್ಚಿದ್ದರೆ, ಅಥವಾ ಕ್ರೆಡಿಟ್ ಕಾರ್ಡನ್ನು ರೆಂಟಲ್ ಕಾರ್, ಪ್ರಯಾಣದ ಟಿಕೇಟುಗಳನ್ನು ಖರೀದಿಸಲು ಬಳಸುವಂತಿದ್ದರೆ – ಅದರ ಅಗ್ರಿಮೆಂಟುಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಟ್ಯಾಕ್ಸ್ ಡಿಡಕ್ಷನ್‌ಗೆ ಬಳಸಿದ ಯಾವುದೇ ದಾಖಲಾತಿ ಇದ್ದರೂ ಅದು ಟ್ಯಾಕ್ಸ್ ಪೇಪರುಗಳ ಜೊತೆ ಇರುವುದು ಒಳ್ಳೆಯದು.

  ಇವುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲವನ್ನೂ ಒಂದೇ ರಿಸೈಕಲ್ ಮಾಡುತ್ತೇನೆ, ಇಲ್ಲಾ ಹರಿದು ಕಸದ ಬುಟ್ಟಿಗೆ ಬಿಸಾಡುತ್ತೇನೆ.
  ನಿಮಗೆ ಸಮಯದ ಕೊರತೆ ಇಲ್ಲದಿದ್ದರೆ ಬೇಕಾದ ಕಾಗದಗಳನ್ನೆಲ್ಲ ಸ್ಕ್ಯಾನ್ ಮಾಡಿ ಮಲ್ಟಿಪಲ್ ಕಾಪಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಸ್ಟೋರ್ ಮಾಡುವುದು ಮತ್ತೊಂದು ಉಪಾಯ.

 3. sritri says:

  ಕಾಳಣ್ಣ, ವಿವರವಾದ ಉತ್ತರಕ್ಕೆ ಧನ್ಯವಾದಗಳು. ಸ್ಕ್ಯಾನ್ ಮಾಡಿ ಮಲ್ಟಿಪಲ್ ಕಾಪಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಸ್ಟೋರ್ ಮಾಡುವುದನ್ನು ಬಿಟ್ಟು ಉಳಿದೆಲ್ಲವನ್ನೂ ಈಗಾಗಲೇ ಪಾಲಿಸುತ್ತಿದ್ದೇನೆ.

  ಕ್ಯಾನ್ಸೆಲ್ ಆದ ಚೆಕ್ಕುಗಳನ್ನು ಇಟ್ಟುಕೊಳ್ಳೊದರಿಂದ ನನಗೆ ಉಪಯೋಗವೂ ಆಗಿದೆ. ೩-೪ ತಿಂಗಳ ಹಿಂದೆ ನಾನು WASTE SERVICESಗೆ $ 50.00 ಚೆಕ್ ಕೊಟ್ಟಿದ್ದೆ. ಅದು ಅವರಿಗೆ ಹೇಗೆ ಕಾಣಿಸಿತೋ ಏನೋ ಬ್ಯಾಂಕ್ ಅಕೌಂಟಿನಿಂದ 500.00$ ಡ್ರಾ ಆಗಿತ್ತು. ಹಳೆ ಚೆಕ್ ಇದ್ದಿದ್ದರಿಂದ ತೋರಿಸಿ ಉಳಿದ ಹಣ ವಾಪಸ್ ತೆಗೆದುಕೊಳ್ಳಲು ಸುಲಭವಾಯಿತು.

 4. ಪ್ರದೀಪ್ ಭಟ್ says:

  ತ್ರಿವೇಣಿಯವರೆ,

  ನಾನಂತೂ ಈ ಪೇಪರ್ ರಾಕ್ಷಸರ ಪೀಡೆ ತಪ್ಪಿಸಿಕೊಳ್ಳಲು ಇತ್ತೀಚಿನಿಂದ paperless statement ತರಿಸಿಕೊಳ್ಳುತ್ತಿದ್ದೇನೆ. ಹಾಗಾಗಿ, ನನ್ನೆಲ್ಲಾ ವ್ಯವಹಾರಗಳು ಈಗ online! ಇದರ ಮೊದಲು, ಆರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, “ಕಡತ ಸಂಹಾರ”-ದಿಂದಲೇ ಪೇಪರ್ ರಾಕ್ಷಸರನ್ನು (tax-ಗೆ ಸಂಬಂಧಪಟ್ಟವುಗಳನ್ನು ಹೊರತುಪಡಿಸಿ) ದಮನಿಸುತ್ತಿದ್ದೆ 🙂

 5. sritri says:

  ಪ್ರದೀಪ್, ಏನಾದರೂ ಹೊಸ ಸಲಹೆ ಕೊಟ್ಟಿದೀರೇನೋ ಅಂದುಕೊಂಡ್ರೆ, ಏನೂ ಇಲ್ಲ! 🙂

 6. ಸುನಾಥ says:

  ತ್ರಿವೇಣಿಯವರೆ,
  ಭಾರತದಲ್ಲಿ ಇಂತಹ ಯಾವುದೆ ಸಮಸ್ಯೆ ನಮಗೆ ಎದುರಾಗುವದಿಲ್ಲ. ಇಲ್ಲಿ ಯಾವ ಕಡತವೂ ಸರಕಾರಿ ಕಚೇರಿಯಲ್ಲಿ ಸಿಗುವದಿಲ್ಲ. ಕಡತ ಯಜ್~ಜದಲ್ಲಿ ಎಲ್ಲವೂ ಭಸ್ಮವಾಗಿ ಬಿಟ್ಟಿರುತ್ತವೆ. ಅದಕ್ಕಾಗಿಯೇ ಭಾರತ ಭೂಮಿಗೆ ಪುಣ್ಯಭೂಮಿ ಎನ್ನುವದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಾತಾಡ್ ಮಾತಾಡ್ ಮಲ್ಲಿಗೆ!ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ

ರಾಗದಲ್ಲಿ ಕನ್ನಡಕ್ಕೂ ಜಾಗರಾಗದಲ್ಲಿ ಕನ್ನಡಕ್ಕೂ ಜಾಗ

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ

ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಯಾಕೆ ಬೇಡ?ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಯಾಕೆ ಬೇಡ?

(ವೆಬ್ ದುನಿಯದಲ್ಲಿ ಪ್ರಕಟವಾಗಿರುವ ಲೇಖನ, ಲೇಖಕ : ಬಿ. ಅವಿನಾಶ್ ) ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ. ಮೊದಲನೆಯದಾಗಿ, ಪ್ರತಿಮಾ