ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು ಬೀದಿ ಅಲೆಯಲು ಹೋಗ್ತಾಳೆ ನೀ ಸ್ವಲ್ಪ ಸುಮ್ನಿರ್ತೀಯಾ… ನಾನು ಕೇಶವಂಗೆ ಫೋನ್ ಮಾಡಿ ಇವತ್ತೇ ಅವಳ ಹಾಸ್ಟೆಲ್ ಗೆ ಹೋಗಿ ಅವಳನ್ನ ನೋಡು ಅಂತ ಹೇಳ್ತೀನಿ… ಎಂದು ಶರ್ಟು ಏರಿಸಿಕೊಂಡು ಹಳ್ಳಿಯ ಏಕೈಕ ಫೋನ್ ಬೂತ್ ಆದ ಮೂರ್ತಿ ಅಂಗಡಿ ಕಡೆಗೆ ನಡೆದರು.ಶಾರದಮ್ಮ ಹೊಡೆದು ಕೊಳ್ಳುತ್ತಿದ್ದ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಲು ದೇವರ ಮುಂದೆ ತುಪ್ಪದ ದೀಪ ಹಚ್ಚಿ ಮುಡಿಪು ಕಟ್ಟಿಟ್ಟು ಬಿಕ್ಕುತ್ತಾ ವಿಷ್ಣು ಸಹಸ್ರನಾಮ ಹೇಳಿಕೊಳ್ಳಲಾರಂಭಿಸಿದರು.

ಪ್ರವಲ್ಲಿಕ ಹಾಸ್ಟೆಲ್ ನಲ್ಲಿ ಪೋನ್ ಇಲ್ಲ ಪೋಲಿ ಹುಡುಗರು ಹುಡುಗಿಯರಿಗೆ ಪೋನ್ ಮಾಡಿ ಕಾಡುತ್ತಾರೆಂದು ವಾರ್ಡ ನ್ ಪೋನ್ ಕೀಳಿಸಿಬಿಟ್ಟಿದ್ದಾರೆ.ಆದರೆ ಇಂಥಾ ಎಮರ್ಜೆನ್ಸಿಯಲ್ಲಿ ತಂದೆ ತಾಯಿಯರಿಗೆ ಭಯವಾಗುವುದಿಲ್ಲವೇ…ಇಲ್ಲಿ ನೋಡಿದರೆ ಶಾರದ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅಳಕ್ಕೆ ಶುರು ಮಾಡಿ ಬಿಡುತ್ತಾಳೆ. ಅಮ್ಮ ನ ಈ ಸ್ವಭಾವ ಗೊತ್ತಿದ್ರೂ ಪ್ರವಲ್ಲಿಕ ಮೂರ್ತಿ ಅಂಗಡಿಗೆ ಒಂದು ಪೋನ್ ಮಾಡಬಾರದೇ…’ ಅಂತ ಮಗಳನ್ನು ಬೈದು ಕೊಳ್ಳುತ್ತಾ ಹೆಂಡತಿ ಬಗ್ಗೆ ಮರುಗುತ್ತಾ ಶಾಸ್ತ್ರಿಗಳು ಮೂರ್ತಿ ಅಂಗಡಿಗೆ ಬಂದು ಸ್ನೇಹಿತ ಕೇಶವನಿಗೆ ಪೋನ್ ಮಾಡಿ ಪ್ರವಲ್ಲಿಕ ಬಗ್ಗೆ ಒಂಚೂರು ನಿಗ ಇಡಬೇಕೆಂದು ಕೇಳಿಕೊಂಡರು.ಮೂರ್ತಿ ಗೆ ದುಡ್ದು ಕೊಡಲು ಹೋದಾಗ ಅವನು ನಿರಾಕರಿಸಿಬಿಟ್ಟ `ಶಾರದಮ್ಮ ಹೇಗಿದ್ದಾರೆ..?’ ಅಂತ ಅವನು ವಿಚಾರಿಸಿದ್ದಕ್ಕೆ`ಹಾಗೇ ಇದ್ದಾಳೆ… ಏನು ಮಾಡುವುದಪ್ಪ ಪುತ್ರಶೋಕಂ ನಿರಂತರಂ ಅಂತ ಕೇಳಿಲ್ವೇ…’ ಎಂದು ನಿಟ್ಟುಸಿರು ಬಿಡುತ್ತಾ ಹೊರಟರು.ಆಗಷ್ಟೇ ಅಂಗಡಿಯೊಳಗೆ ಬಂದ ಮೂರ್ತಿ ಹೆಂಡತಿ `ಧಾರಿಣಿ ‘ಹೇಗಿದ್ದಾಳೆ..?ಏನಾದ್ರೂ ಸಮಾಚಾರ ಉಂಟಾ…? ಅಂತ ಕೇಳಿದ್ದು ಮಗನ ನೆನಪಲ್ಲಿ ಮುಳುಗಿದ್ದ ಅವರಿಗೆ ಕೇಳಿಸಲಿಲ್ಲ…

***
ಶಾಸ್ತ್ರಿಗಳು ಆಶಿಸಿದಂತೆ ಪ್ರವಲ್ಲಿಕ ಅಂದು ಬೀದಿ ಅಲೆಯಲು ಹೋಗದೆ ತೆಪ್ಪಗೆ ಹಾಸ್ಟೆಲ್ ನಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅವಳ ಗೆಳತಿಗೊಂದು ಬರ್ತ್ ಡೇ ಕಾರ್ಡ್ ಕೊಳ್ಳಲು ಅವಳು `ಸಪ್ನಾ’ಗೆ ಹೋಗಿದ್ದು ಮೊದಲ ತಪ್ಪು. ಕೆಂಪೇಗೌಡ ರೋಡ್ನಲ್ಲಿ ಗೂಂಡಾ ನನ್ನು ನೋಡಿ ನಡುಗುತ್ತಾ ಬಾಯಿ ಮುಚ್ಚಿ ಕೊಂಡು ಬಂದು ಬಿಟ್ಟಿದ್ದರೆ ಸೇಫಾಗಿದ್ದಿರುತ್ತಿದ್ದಳೋ ಏನೋ…ಅವನು ಕಾರ್ ಬಾಂಬ್ ಇಡುವುದನ್ನು ನೋಡಿಬಿಟ್ಟಿದ್ದಳು ಅಲ್ಲದೇ ಕಿತ್ತೂರು ರಾಣಿಯ ಸ್ಟೈಲ್ ನಲ್ಲಿ (ಅಫ್ಕೋರ್ಸ್ ನಡುಗುತ್ತಾ ತೊದಲುತ್ತಾ)ಪೋಲೀಸ್ ಗೆ ಹೇಳಿ ಬಿಡುತ್ತೇನೆ ಅಂತ ಬೇರೆ ಹೇಳಿ ಬಿಟ್ಟಿದ್ದಳು.ಬಿಳಿ ಪಾರಿವಾಳದ ತರ ನಾಜೂಕಾಗಿ ಇರುವ ಈ ಹುಡುಗಿಗೆ ತಮ್ಮನ್ನು ತಡೆಯುವ ಶಕ್ತಿ ಇಲ್ಲವೆಂದು ಗೂಂಡಾ ಪಡೆಗೆ ಗೊತ್ತಿತ್ತಾದ್ದರಿಂದ ಇವಳನ್ನು ನಂತರ ನೋಡಿಕೊಂಡರಾಯಿತು ಬಿಡುಅಂತ ಆ ಗಳಿಗೆಯಲ್ಲಿ ನಿರ್ಲಕ್ಷಿಸಿಬಿಟ್ಟಿದ್ದರೂ ಅವರು ಅವಳನ್ನು ಬೇಟೆ ಆಡದೇ ಬಿಡುವುದಿಲ್ಲ…

ನ್ಯೂಯಾರ್ಕ್ನಲ್ಲಿ ಆರು ವರ್ಷದ ಹಿಂದೆ ಕಣ್ಮರೆಯಾದ ಪ್ರತಾಪನ ಆತ್ಮಕ್ಕೆ ಇದರಿಂದ ಶಾಂತಿ ಸಿಗುತ್ತದೆ ಎಂದು ನಂಬಿದ ಅವಳ ಸುಕೋಮಲ ಮನಸ್ಸಿಗೆ ಮಾಫಿಯಾದ ಆಳ ಅಗಲಗಳು ನಿಲುಕದ ವಿಷಯ ಆದರೆ ತನ್ನಣ್ಣನ ಸಾವಿಗಾಗಿ ಸೇಡು ತೀರಿಸಿಕೊಳ್ಳುತ್ತೇನೆ ಎಂಬ ಹುಂಬ ಧೈರ್ಯದ ಈ ಹುಡುಗಿಯನ್ನು ರಕ್ಷಿಸುವವರು ಯಾರು??
*************

ಬೆಳಗ್ಗೆಯಿಂದ ಹೇಗೊ ಸುಧಾರಿಸಿಕೊಂಡಿದ್ದರೂ, ರಾತ್ರಿಯಾಗುತ್ತಿದ್ದಂತೆ ಶಾಸ್ತ್ರಿಗಳು ಮಗನ ನೆನಪಿನಲ್ಲಿ ವಿಹ್ವಲಗೊಳ್ಳತೊಡಗಿದರು. ಏನೇನೊ ಕನಸುಗಳು… ರಣಹದ್ದೊಂದು ತನ್ನ ಮಗನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನೆದುರೇ ಇನ್ನೇನು ಕಣ್ಣನ್ನು ಕುಕ್ಕಲು ತಯಾರಾದಂತೆ…ರೌದ್ರಾವತಾರ ತಾಳಿದ ಕಡಲು ಉಕ್ಕಿಹರಿದು ತನ್ನ ಮಗನನ್ನು ಕೊಚ್ಚಿ ಒಯ್ದಂತೆ….”ಅಪ್ಪಾ” ಅನ್ನುವ ಆರ್ತನಾದದೊಂದಿಗೆ ಕಣ್ಣೆದುರೇ ಮಗನ ದೇಹ ಇಂಚಿಂಚೆ ನೀರೊಳಗೆ ಕಣ್ಮರೆಯಾದಂತೆ….ಭಗ್ಗನೆ ಭುಗಿಲೆದ್ದ ಬೆಂಕಿ ಕಣ್ಣೆದುರೇ ಮಗನ ದೇಹವನ್ನು ಇಂಚಿಂಚೆ ಸುಡುತ್ತಿರುವಂತೆ….ರುದ್ರ ಭಯಾನಕ, ಬೀಭತ್ಸ ಕನಸುಗಳು…

ಶಾಸ್ತ್ರಿಗಳು ನಿದ್ದೆಕಣ್ಣಲ್ಲೆ ಬೊಬ್ಬೆಹೊಡೆಯತೊಡಗಿದರು, ತನ್ನೆರಡೂ ಕೈಗಳನ್ನು ಜೋರಾಗಿ ಗಾಳಿಯಲ್ಲಿ ಆಡಿಸುತ್ತ… “ಮಗೂ, ಬಂದೆ ಇರು..ಯಾಕೆ ಓಡ್ತಿದೀಯಾ…ನಾನೂ ಬಂದೆ ಇರು…”.

ದಡಬಡಿಸಿ ಎದ್ದ ಶಾರದಮ್ಮ ಕಂಗಾಲಾದರು. “ಏನಾಯ್ತೂಂದ್ರೆ…ಇಲ್ನೋಡಿ” ಅಂತ ಶಾಸ್ತ್ರಿಗಳನ್ನು ತನ್ನೆರಡೂ ಕೈಗಳಲ್ಲಿ ಹಿಡಿದು, ನಿದ್ದೆಯಿಂದ ಎಬ್ಬಿಸಲು ನೋಡಿದರು…ಶಾಸ್ತ್ರಿಗಳು ಬಡಬಡಿಸುತ್ತಲೇ ಇದ್ದರು…”ನೋಡೆ ಶಾರದಾ, ಹೇಗೆ ಹೋಗ್ತಿದ್ದಾನೆ ಒಂದೂ ಮಾತು ಆಡ್ದೆ, ನೀನಾದ್ರೂ ಬುದ್ಧಿ ಹೇಳೆ…” ಶಾರದಮ್ಮನಿಗೆ ದುಃಖ ಉಮ್ಮಳಿಸಿ ಬಂತು..ಗಂಡನನ್ನು ಸಂತೈಸುವ ಪರಿ ಗೊತ್ತಾಗದೆ..

ಐದು ನಿಮಿಷವೇ ಬೇಕಾಯ್ತು, ಶಾಸ್ತ್ರಿಗಳಿಗೆ ಪೂರ್ತಿ ಎಚ್ಚರವಾಗಲು…ಎಚ್ಚರವಾಗಿದ್ದೇ ತಪ್ಪಿನ ಅರಿವಾಯ್ತು..ಶಾರದಮ್ಮನನ್ನು ಗಟ್ಟಿಯಾಗಿ ಬಳಸಿಕೊಂಡು ಮನಸೋ ಇಚ್ಛೆ ಗಳಗಳನೆ ಅತ್ತುಬಿಟ್ಟರು..”ಅತ್ತು ಬಿಡು ಶಾರದಾ, ಅತ್ತು ಬಿಡು..” ಶಾರದಮ್ಮನನ್ನು ಪ್ರೀತಿಯಿಂದ ಮೈದಡವಿ, ತನ್ನೆದೆಗಾನಿಸಿಕೊಂಡ ಶಾಸ್ತ್ರಿಗಳು ತೀರ ಗಂಭೀರರಾದರು..
“ಎಂಥ ತಮಾಷೆ ಅಲ್ವಾ, ಶಾರದಾ? ನಾವು ಯಾವತ್ತೂ ನಮ್ಮ ಕ್ಷಣಗಳು ನಿರಂತರವಾಗಿರತ್ತೆ ಅಂದ್ಕೊಳ್ತೇವೆ. ನಾವು ಪ್ರೀತಿಸುವ, ನಮ್ಮ ಇಷ್ಟದ, ಎಲ್ಲವೂ ನಮ್ಮೊಂದಿಗೆ ಯಾವಾಗಲೂ ಇರುತ್ತವೆ, ಇರಬೇಕು ಅನ್ನುವ ಹುಂಬ ಹಂಬಲದೊಂದಿಗೆ ಬದುಕುತ್ತೇವೆ…ಹ್ಮ್…ಬಹುಶಃ ಅದೇ ಹುಂಬತನದಿಂದಲೇ ಇರಬೇಕು, ನಮ್ಮ ಕ್ಷಣಗಳನ್ನು ಅನುಭವಿಸದೇ ಯಾವುದೋ ಹುಚ್ಚುಧಾವಂತಕ್ಕೆ ಬಿದ್ದವರ ಹಾಗೆ ಹಣ, ಅಂತಸ್ತು, ಯಶಸ್ಸು ಅಂತ ಬಿಸಿಲುಗುದುರೆಯ ಬೆನ್ನೇರಿ ಓಡುತ್ತಲೇ ಇರುತ್ತೇವೆ…ಓಟ…ಓಟ… ನಿರಂತರ ಓಟ….ಆರಾಮವಾಗಿ ಒಂದುಸಿರು ತೆಗೆದುಕೊಳ್ಳಲು ಪುರಸೊತ್ತಿಲ್ಲದಂತೆ….ಕ್ಷುಲ್ಲಕ ವಿಷಯಕ್ಕೂ ಜಿದ್ದಿಗೆ ಬಿದ್ದವರಂತೆ ಹೋರಾಡುತ್ತೇವೆ…..ನಮ್ಮತನ ಮೆರೆಯಲು, ಅದನ್ನು ಬೇರೊಬ್ಬರ ಮೇಲೆ ಹೇರಲು ಇನ್ನಿಲ್ಲದಂತೆ ಹೆಣಗುತ್ತೇವೆ……ಹ್ಮ್.”

“ಶಾರದಾ, ನಾವೆಷ್ಟು ಅತ್ತರೂ ಅಷ್ಟೇ. ಪ್ರತಾಪ ಮತ್ತೆ ಬರಲಾರ.. ಬಹುಶಃ ಅವನ ಕರ್ತವ್ಯ ಮುಗಿಯಿತು ಅನ್ನಿಸುತ್ತೆ. ಯಾವತ್ತೂ ಚುರುಕಾಗಿ ನಗು ನಗುತ್ತಲೇ ಇದ್ದ ಅವನಿಗೆ ಅವಮಾನ ಮಾಡುತ್ತಿದ್ದೇವಾ ನಾವು ಅತ್ತು? ನಮ್ಮ ಪ್ರೀತಿಯ ವಸ್ತು ನಮ್ಮೊಂದಿಗೇ ಇರಬೇಕು ಅಂದರೆ ಅದು ಸ್ವಾರ್ಥವಲ್ಲವಾ? ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳಿಗೆ ಯಾಕೆ ಅತ್ತು ಕರೆಯೋಣ ಹೇಳು? ನಾನು ನಿಜ ಹೇಳಲಾ…ನೋಡು ಈ ಕ್ಷಣ ಇದೆಯಲ್ಲ, ನೀನು ನನ್ನ ತೆಕ್ಕೆಯೊಳಗೆ ಹೀಗೆ ಭದ್ರವಾಗಿ ಅಪ್ಪಿಕೊಂಡು ಕೂತುಬಿಟ್ಟಿದ್ದೀಯಲ್ಲ, ಎಷ್ಟು ಚಂದದ ಕ್ಷಣ ಅಲ್ಲವಾ? ಶಾರದಾ, ಬಹುಶಃ ಈ ಕ್ಷಣ ಮತ್ತೆ ಬರಲಾರದೇನೋ…ಬಾ ಶಾರದಾ..ಇಬ್ಬರೂ ಮನಸಾರೆ ನಕ್ಕು ಬಿಡೋಣ, ನಾಳೆಯೇ ಇಲ್ಲದೆನ್ನುವಂತೆ….ಈ ಕ್ಷಣವನ್ನ ಗೌರವಿಸೋಣ, ಆತ್ಯಂತಿಕವಾಗಿ ಪ್ರೀತಿಸೋಣ…..ನಕ್ಕು ಬಿಡು, ಶಾರದಾ.. ನಕ್ಕು ಬಿಡು……

***

4 thoughts on “ಹೆತ್ತವರ ಅಳಲು – 2”

  1. ಧಾರಿಣಿ ಆದಿನವೆಲ್ಲಾ ತನ್ನ ಪ್ರೀತಿಯ ಅಣ್ಣನ ನೆನಪಲ್ಲಿ ಕಳೆದಳು.ತನಗೆ ಸೈಕಲ್ ಕಲಿಸುತ್ತಿದ್ದ ಅಣ್ಣ…ಜಡೆ ಎಳೆದು ರೇಗಿಸುತ್ತಿದ್ದ ಅಣ್ಣ…ಗಂಟಾನುಗಟ್ಟಲೆ ಪಕ್ಕದಲ್ಲಿ ಕೂರಿಸಿಕೊಂಡು ಟ್ರಿಗ್ನಾಮಿಟ್ರಿ ಹೇಳಿಕೊಡುತ್ತಿದ್ದ ಅಣ್ಣ…ಅಪ್ಪನ ಜೇಬು ತನ್ನ

    ಹರೆಯದ ಆಸೆಗಳನ್ನು ಪೂರೈಸಲ್ಲು ಆಗದಿದ್ದ ಗಳಿಗೆಗಳಲ್ಲಿ ತನ್ನ ಮುಖ ಸಣ್ಣದಾದಾದಲೆಲ್ಲಾ ನಾನು ಕೆಲಸಕ್ಕೆ ಸೇರಿ ನಿನಗೇನೇನು ಬೇಕು ಹೇಳು ಎಲ್ಲಾ ತಂದು ಕೊಡುತ್ತೇನೆ ಅಂತ ರಮಿಸುತ್ತಿದ್ದ ಅಣ್ಣ… ಎದೆ ಉಬ್ಬಿಸಿ ಪ್ರೆಸಿಡೆಂಟ್ ಸ್ಕೌಟ್ ಮೆಡಲ್ ಅನ್ನು

    ರಾಷ್ಟಪತಿಗಳಿಂದ ಸ್ವೀಕರಿಸಿದ ಅಣ್ಣ…ತಾನು ಸಂಪಾದಿಸಲು ಶುರು ಮಾಡಿದ ನಂತರ ಮೊದಲತಿಂಗಳ ಸಂಬಳದಲ್ಲಿ ನನ್ನ ಮಡಿಲ ತುಂಬಾ ಉಡುಗೊರೆ ತುಂಬಿದ್ದ ಅಣ್ಣ… ನನ್ನ ಬಾಳ ಗೆಳೆಯ ರಾಜೀವನನ್ನು ನನ್ನ ಜೀವನದಲ್ಲಿ ಪರಿಚಯಿಸಿದ

    ಅಣ್ಣ…
    ರಾಜೀವನ ಸ್ಥಿತಿಯೇನೂ ಭಿನ್ನವಾಗಿರಲಿಲ್ಲ… ಪ್ರತಾಪ ಅವನ ಜೀವದ ಗೆಳೆಯ…ಆಪ್ತ ಮಿತ್ರ…ಇಬ್ಬರೂ ಇಂಜಿನಿಯರಿಂಗ್ ಸಹಪಾಠಿಗಳು ನಂತರ ತಾನು ಸೇರಿದ ಕಂಪನಿಗೇ ರಾಜೀವನನ್ನು ಒತ್ತಾಯದಿಂದ

    ಬರಮಾಡಿಕೊಂಡಿದ್ದ.ಅಷ್ಟೊತ್ತಿಗಾಗಲೇ ರಾಜೀವ ಶಾಸ್ತ್ರಿಗಳ ಮನೆಯವನಂತೆ ಬೆರೆತು ಹೋಗಿದ್ದೂ,ಧಾರಿಣಿಗೆ ತನ್ನ ಹೃದಯವನ್ನು ಅರ್ಪಿಸಿದ್ದೂ ಆಗಿತ್ತು.ಅಸಾಧಾರಣ ಬುದ್ದಿವಂತನಾಗಿದ್ದ ಪ್ರತಾಪ ಅಲ್ಪ ಕಾಲದಲ್ಲೇ ಲೀಡ್ ಪೊಸಿಶನ್ ಗೆ ಏರಿದರೂ
    ರಾಜೀವನಿಗೆ ಅಸೂಯೆಯೇನಿಲ್ಲ ಮಿತ್ರನ ಪ್ರಗತಿ ಕಂಡು ಅಚ್ಚರಿ ತುಂಬಿದ ಹೆಮ್ಮೆ. ನ್ಯೂಯಾರ್ಕ್ ನ ಪ್ರಾಜೆಕ್ಟ್ ನಲ್ಲಿ ಪ್ರತಾಪನೇ ಟೀಮ್ ಲೀಡ್ ಆಗಿದ್ದ ರಾಜೀವನನ್ನು ತನ್ನ ಟೀಮ್ ನಲ್ಲಿ ಸೇರಿಸಿಕೊಂಡಿದ್ದ.ವರ್ಲ್ಡ್ ಟ್ರೇಡ್ ಸೆಂಟರ್ ನ ಇಪ್ಪತ್ತ ಮೂರನೇ ಮಹಡಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದದ್ದು.
    ಸಸ್ಯಾಹಾರಿ ಮಿತ್ರರಿಬ್ಬರೂ ದುಬಾರಿ

    ನ್ಯೂಯಾರ್ಕ ನಲ್ಲಿ ತಮ್ ತಮ್ಮ ಪಾಕಪ್ರವೀಣ್ಯತೆಯನ್ನು ಒಬ್ಬರಿನ್ನೊಬ್ಬರ ಮೇಲೆ ಪ್ರಯೋಗಿಸಿ ಸೋತು ಹೋಗಿದ್ದ ಕಾಲದಲ್ಲಿ `ಬೇಗ ಮದ್ವೆ ಮಾಡ್ಕೊಳ್ಳಯ್ಯಾ…ನಿನ್ ಅಡುಗೆ ತಿಂದು ನಾನು ಹೊಟ್ತೆ ಕೆಟ್ಟು ಒಂದು ದಿನ ಗೊಟಕ್ ಅಂದ್ಬುಡ್ತೀನಿ

    ಅಷ್ಟೆ…ಅಂತ ರಾಜೀವನಿಗೆ ಪ್ರತಾಪ ರೇಗಿಸುತ್ತಿದ್ದ ಇಂಡಿಯಾಗೆ ಮನೆಗೆ ಪೋನ್ ಮಾಡಿದಾಗಲೆಲ್ಲಾ `ಧಾರಿಣೀ.. ಬೇಗ ಚೆನ್ನಾಗಿ ಅಡುಗೆ ಮಾಡೋದು ಕಲ್ತು ಕೊಳ್ಳೇ… ನಿನ್ ಭಾವಿ ಗಂಡನ ಅಡುಗೆ ತಿಂದೂ ತಿಂದೂ ಸಾಕಾಗಿದೆ

    ನಂಗೆ…’ ಎಂದು ಧಾರಿಣಿಯನ್ನು ಛೇಡಿಸುತ್ತಿದ್ದ…
    ಮೊದಲ ಹಂತದ ಪ್ರಾಜೆಕ್ಟ್ ಮುಗಿದು ಎರಡನೇ ಫೇಸ್ ಶುರು ವಾಗುವ ಮೊದಲು ರಾಜೀವ -ಧಾರಿಣಿಯರ ಮದುವೆ ನಡೆದಿತ್ತು…ಅಮ್ಮನ ಮನೆ ಬಿಟ್ಟು ಹೊರಡುವಾಗ ಧಾರಿಣಿಯ ಕಣ್ತುಂಬಿ ಬಂದಿದ್ದರೂ ರಾಜೀವ ಸಾನಿದ್ಯ ಜೊತೆಗೆ ಅಪರಿಚಿತ

    ದೇಶದಲ್ಲಿ ಪ್ರೀತಿಯ ಅಣ್ಣನ ನೆರಳು ಇರುತ್ತದೆಂಬ ಭರವಸೆ ಅವಳಿಗೆ ಉತ್ಸಾಹ ಬಲ ನೀಡಿತ್ತು. ಹಾಗೇ ಶಾರದಮ್ಮನಿಗೂ ಮಗಳನ್ನು ಕಳಿಸಿಕೊಡುವಾಗ ಪ್ರತಾಪ ಅಲ್ಲೇ ಇದ್ದಾನಲ್ಲ ಎಂದ ಸಂಗತಿ ನೆಮ್ಮದಿ ನೀಡಿತ್ತು…

    ಧಾರಿಣಿ,ರಾಜೀವ ಎಷ್ಟು ಹೇಳಿದರೂ ಕೇಳದೆ ಪ್ರತಾಪ `ನೀವಿಬ್ಬರೂ ನವದಂಪತಿಗಳು ನಿಮ್ಮಿಬ್ರ ಮಧ್ಯೆ ನಾನ್ಯಾಕೇ…? ಪಾನಕದಲ್ಲಿ ಪರಕೆ ಕಡ್ಡಿ ತರ… ಅಂತ ಧಾರಿಣಿ ಬಂದ ಮೇಲೆ ತನ್ನ ವಾಸ್ತವ್ಯ ವನ್ನು ಬ್ಯಾಚುಲರ್ ಮಿತ್ರನ ಮನೆಗೆ

    ಸಾಗಿಸಿದ್ದ
    ಆದರೆ ರಾಜೀವ ಪ್ರತಾಪನಿಗೂ ಸೇರಿಸಿ ಮಧ್ಯಾನ್ಹ ಊಟ ಒಯ್ಯುತ್ತಿದ್ದ.ಧಾರಿಣಿಯ ಹೊಸ ರುಚಿ ಪ್ರಯೋಗಗಳಿಗೆಲ್ಲಾ ಇಬ್ಬರೂ ಬಲಿಪಶುವಾದಾಗಲೆಲ್ಲಾ `ನಿನ್ ಅಡುಗೆಯೇ ಚೆನ್ನಾಗಿರ್ ತಿತ್ತಲ್ಲೋ ಮೈ ಡಿಯರ್ ಬ್ರದರ್ ಇನ್ ಲಾ’ ಅಂತ ರಾಜೀವ
    ನ ಹತ್ರ ಹೇಳಿಕೊಂಡು ನಗುತ್ತಿದ್ದ ಪ್ರತಾಪ

    ಅಂದು ಆ ಕರಾಳ ದಿನ….
    ಸಮಯಪಾಲನೆಯ ಬಗ್ಗೆ ಕಟ್ಟು ನಿಟ್ಟಾಗಿದ್ದ ಪ್ರತಾಪ ಕೊಂಚ ಬೇಗನೆ ಆಫೀಸಿನಲ್ಲಿ ಕಾರ್ಯಮಗ್ನನಾಗಿದ್ದ…
    ಧಾರಿಣಿಯ ತೋಳಸೆರೆ ಬಿಡಿಸಿಕೊಂಡು ಅಂದು ರಾಜೀವ ಆಫೀಸು ಸೇರುವದು ಕೊಂಚ ತಡವಾಯಿತು…
    ಅವನು ತಲುಪುವಷ್ಟರಲ್ಲಿ…….ಘೋರ ನಡೆದು ಹೋಗಿತ್ತು….
    ಮೃದು ಮನಸ್ಸಿನ ರಾಜೀವ ನಿಂತಲ್ಲೇ ಕುಸಿದು ಹೋಗಿದ್ದ… ಹುಚ್ಚು ಹಿಡಿದವನಂತೆ ಬಡಬಡಿಸುತ್ತಾ
    ರಾಜೀವ ಅವಶೇಷಗಳಲ್ಲಿ ತನ್ನ ಮಿತ್ರನನ್ನು ಹುಡುಕಲು ಮುಂದಾಗಿದ್ದ… ಆದರೆ ಪೋಲೀಸರು ಮತ್ತು ಅವನನನ್ನು ಬಲವಂತ ದಿಂದ ಮನೆಗೆ ಅಟ್ಟಿದ್ದರು….

  2. ರಾಜೀವ ಅವಶೇಷಗಳಲ್ಲಿ ತನ್ನ ಮಿತ್ರನನ್ನು ಹುಡುಕಲು ಮುಂದಾಗಿದ್ದ… ಆದರೆ ಪೋಲೀಸರು ಮತ್ತ FBI ಅವನನನ್ನು ಬಲವಂತ ದಿಂದ ಮನೆಗೆ ಅಟ್ಟಿದ್ದರು….

  3. ತನಗೆ ಊಟ ಕೊಡಲು ಬಂದವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಭಂದನದಿಂದ ತಪ್ಪಿಸಿಕೊಂಡು

    ಹೊರಗೋಡಿ ಬಂದಿದ್ದಳು ಪ್ರವಲ್ಲಿಕಾ.ಅವಳಿಗಿರುವ ಧೈರ್ಯಕ್ಕೆ ಅವಳು ಅಷ್ಟು ಮಾಡಿದ್ದೇ ಹೆಚ್ಚ್ಯು!
    ಅದು ಬೆಂಗಳೂರು ಹೊರವಲಯದಲ್ಲಿರುವ ಯಾವುದೋ ಪ್ರದೇಶ ಅದು.ಸಾಕಷ್ಟು ದೂರ ಓಡೋಡಿ ಬಂದ
    ಮೇಲೆ ಬಸ್ ಸ್ಟಾಪ್ ಒಂದು ಕಂಡಾಗ ಸ್ವಲ್ಪನಿರಾಳವೆನಿಸಿತ್ತು ಅವಳಿಗೆ…ರೆಡ್ ಬೋರ್ಡ್ ಬಸ್

    ಬಂದಾಗ ಹತ್ತಿದ ಜನರಲ್ಲಿ ಒಂದಾಗಿ ಬಸ್ಸೊಳಗೆ ನುಸುಳಿದ್ದಳು. ಟಿಕೆಟ್ಟಿಗೆ ಕೈಯಲ್ಲಿ ಕಾಸಿಲ್ಲ(ಅಮ್ಮ

    ಬ್ಲೌಸಿನಲ್ಲಿ ಯಾಕೆ ದುಡ್ಡಿಟ್ಟುಕೊಳ್ಳುತ್ತಾರೆ ಅಂತ ಅವಳಿಗೆ ಆಗ ಹೊಳೆಯಿತು) ಕಂಡೆಕ್ಟರ್ ಕೇಳಿದಾಗ
    ಸರಾಗವಾಗಿ ಹಿಂದೆ ತೊಗೋತಾರೆ ಅಂತ ಉತ್ತರಿಸಿದವಳಿಗೆ ತನ್ನ ಮೇಲೆ ತನಗೇ ಬೆರಗು…!

    ************
    ಪ್ರವಲ್ಲಿಕಾ ಹೀಗೆ ತಾನು ಓಡಿ ಬಂದ ಕತೆಯನ್ನು ಸಾದ್ಯಂತವಾಗಿ ಹೇಳಿ ಮುಗಿಸಿದಾಗ ಕಾಂತಿಯ ಬಿಟ್ಟ

    ಬಾಯಿ ಬಿಟ್ಟಂತೆಯೇ ಇತ್ತು…
    ಅವಳು ತಂದ ಊಟ ತಟ್ಟೆಗಳಲ್ಲೇ ತಣ್ಣಗಾಗಿತ್ತು…

  4. ಧಾರಿಣಿ ಪ್ರವಲ್ಲಿಕ ಅಕ್ಕ ತಂಗಿಯರಾದರೂ ಬಹಳಷ್ಟು ಸಾಮ್ಯವಿದೆ ಚೆನ್ನಾಗಿ ಪರಿಚಯವಿಲ್ಲದವರು ಇವರಿಬ್ಬರ ಶಾಲಾದಿನಗಳಲ್ಲೂ ಕಾಲೇಜು ದಿನಗಳಲ್ಲೂ ಅವಳನ್ನು ಇವಳು ಇವಳನ್ನು ಅವಳು ಅಂದುಕೊಂಡು ಬೇಸ್ತು ಬೀಳುವುದಿತ್ತು ಪ್ರವಲ್ಲಿಕ ಧಾರಿಣಿಗಿಂಥಾ

    ಸ್ವಲ್ಪ ಕುಳ್ಳಿ.ಧಾರಿಣಿ ಪ್ರವಲ್ಲಿಕಾಳಷ್ಟು ಬಿಳುಪಿಲ್ಲ.ಅಷ್ಟೇ ಅವರಿಬ್ಬರಲ್ಲಿ ಎದ್ದು ತೋರುವ ವ್ಯತ್ಯಾಸ.ಆದರೆ ಸ್ವಭಾವದಲ್ಲಿ ಅಜಗಜಾಂತರವಿದೆ.ಧಾರಿಣಿ ಬುದ್ದಿವಂತೆ,ಚಾಲೂಕು ಧೈರ್ಯಸ್ತೆ.ಪ್ರವಲ್ಲಿಕ ಪುಕ್ಕಲಿ ಜಿರಳೆ ಕಂಡರೂ ಗಡಗಡ ನಡುಗಿ ಬಿಡುತ್ತಾಳೆ
    ಧಾರಿಣಿಯದೂ ಅವಳಣ್ಣ ಪ್ರತಾಪನಂತೆ ಅಸಾಧಾರಣ ಬುದ್ದಿಮತ್ತೆ.ಭಾರತದಲ್ಲಿದ್ದಾಗ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು ಮದುವೆಯಾಗಿ ನ್ಯೂಯಾರ್ಕ್ ಗೆ ಬಂದ ಮೇಲೆ ಹೆಛ್ ಫೋರ್ ವೀಸಾ ಸ್ಟೇಟಸ್ ನಿಂದಾಗಿ ಕೆಲವು ದಿನ ಮನೆಯಲ್ಲಿ

    ಕೂರಬೇಕಾಯ್ತು.ನಂತರ ತನ್ನ ಬುದ್ದಿಬಲದಿಂದ ಒಂದು ಸ್ಟಾರ್ಟ್ ಅಪ್ ಕಂಪನಿಯೊಂದರಲ್ಲಿ ಕೆಲಸ ಸಂಪಾದಿಸಿದಳು ಈಗ ರಾಜೀವವನಿಗಿಂಥಾ ಮೊದಲೇ ಅವಳ ಗ್ರೀನ್ ಕಾರ್ಡ್ ಬಂದಿದೆ.ಅವಳ ಬುದ್ದಿವಂತಿಕೆಯೇ ಅವಳಿಗೆ ಆಪಾಯ ತರುವಂಥಾ ಪರಿಸ್ಥಿತಿ

    ತಂದಿದೆ ಈಗ…
    ಧಾರಿಣಿಯ ತಲೆಯಲ್ಲಿರುವ ಹೊಸ ಆವಿಷ್ಕಾರದ ಐಡಿಯಾಗೆ ಪೇಟೆಂಟ್ ಮಾಡಿಸಿಕೊಳ್ಳಲು ಅವಳ ಕಂಪನಿ ಸೂಚಿಸಿದೆ ಆದರೆ ಈ ಚಿಕ್ಕ ಕಂಪನಿ ಅಂಥಾ ಒಂದು ಪೇಟೇಂಟ್ ಪಡೆದು ಬಿಟ್ಟರೆ ಅದರ ಎದುರಾಳಿ ದೈತ್ಯ ಕಂಫನಿಗೆ ಆಗುವ ನಷ್ಟ ಅಗಾಧ
    ಈ ಎದುರಾಳಿ ದೈತ್ಯ ಕಂಫನಿ ಧಾರಿಣಿಯನ್ನು ಖರೀದಿಸಲು ಪ್ರಯತ್ನಿಸಿತು… ಧಾರಿಣಿ ಸೊಪ್ಪು ಹಾಕಲಿಲ್ಲಾ…ಸಾಮದಾನಗಳಾದ ನಂತರ ದಂಡವೆಂಬ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ….

    ***************
    ಧಾರಿಣಿ ತನ್ನ ಸುರಕ್ಷತೆಗಾಗಿ ಸ್ವಲ್ಪ ದಿನ ಎಲ್ಲಾದರೂ ಹೋಗುವುದೇ ಲೇಸೆಂದು ಅವಳ ಕಂಪನಿಯ ಮುಖ್ಯಸ್ಥರು ಸೂಚಿಸಿದರು. ರಾಜೀವನೂ ಅನುಮೋದಿಸಿದ. ಧಾರಿಣಿ ನಾನು ಹೇಡಿಯಂತೆ ಯುದ್ಧರಂಗ ಬಿಟ್ಟು ಓಡಿ ಹೋಗುವುದಿಲ್ಲವೆಂದು ವಾದಿಸಿದಳು
    ಅದು ಹೇಡಿತನ ಅಲ್ಲವೆಂದು ಹುಷಾರಿಯಿಂದು ಅವಳನ್ನು ಒಪ್ಪಿಸಿದ ರಾಜೀವ.ಅದರಂತೆ ಧಾರಿಣಿ ಭಾರತಕ್ಕೆ,ಬೆಂಗಳೂರಿಗೆ ಹೊರಟು ನಿಂತಿದ್ದಾಳೆ.ಅಲ್ಲಿ ಜಾವ ಪ್ರೋಗ್ರ್ಯಾಂ ಕಲಿಯುವವಳಂತೆ ನಟಿಸಿ ಪ್ರವಲ್ಲಿಕಾ ಹಾಸ್ಟೆಲ್ನಲ್ಲಿ `ಗೆಸ್ಟ್’ ಅಂತ

    ಇರುವುದೆಂದು ಅವಳ ಪ್ಲ್ಯಾನ್. ಹಳ್ಳಿಯಲ್ಲಿನ ಅಪ್ಪ ಅಮ್ಮನಿಗೂ ಸದ್ಯಕ್ಕೆ ಪ್ರವಲ್ಲಿಕಾಗೂ ಜಾವ ಕಲಿಯಲು ಬರುತ್ತಿದ್ದೇನೆ ಅಂತಲೇ ಹೇಳಿದ್ದಾಳೆ. ಕೇಶವನ ಮನೆಯಲ್ಲಿರಮ್ಮಾ ಅಂತ ಶಾಸ್ತ್ರಿಗಳು ಹೇಳಿದಾಗ ಇಲ್ಲಪ್ಪಾ ಅವರ ಮನೆಯಲ್ಲಿ ಮಡಿ ಜಾಸ್ತಿ ಅಲ್ಲದೇ

    ಅವರ ಮನೆ ಮತ್ತಿಘಟ್ಟದಲ್ಲಿರುವುದರಿಂದ ಓಡಾಟ ಕಷ್ಟ ಅಂತ ನಿರಾಕರಿಸಿ ಬಿಟ್ಟಿದ್ದಾಳೆ….ಜೊತೆಗೆ ಪ್ರವ್ಲ್ಲಿಕಾ ಜೊತೆ ಇರಲು ಇನ್ಯಾವಾಗ ಸಮಯ ಸಿಗುತ್ತದೆ ಎಂದು ಹೇಳಿದ್ದಾಳೆ
    ಅವಳಿಗೆ ತಿಳಿಯದ ವಿಷಯವೆಂದರೆ ಅವಳು ಭಾರತಕ್ಕೆ ಹೊರಡುವ ಈ ಸಂಗತಿ ಆ ಎದುರಾಳಿ ದೈತ್ಯಕಂಪನಿ ಈಗಾಗಲೇ ಗೊತ್ತಿದೆ ಮತ್ತು ಅವರುಗಳು ಅವಳನ್ನು ಬೆಂಗಳೂರಿಗೂ ಹಿಂಬಾಲಿಸುತ್ತಿದ್ದಾರೆ ಎಂಬುದು….
    ವಿಪರ್ಯಾಸವೆಂದರೆ ಅವಳ ಬಾಸ್ ಆದ ವ್ಯಕ್ತಿಯೇ ಆ ದೈತ್ಯನಿಂದ ಖರೀದಿಸಲ್ಪಟ್ಟು ಈ ವಿಷಯ ತಿಳಿಸಿರುವುದು!! ಅಮೇರಿಕಾದಂಥ ದೇಶದಲ್ಲಿ ಬೌದ್ದಿಕ ಹಕ್ಕುಗಳ ಮೇಲಿನ ಧಾಳಿಗಳನ್ನು ಬಹಳ ತೀವ್ರವಾಗಿ ಪರಿಗಣಿಸುತ್ತಾರೆ…ಆದರೆ ಭಾರತದಲ್ಲಿ

    ಹಾಗಿಲ್ಲ…ಧಾರಿಣಿಯನ್ನು ವಶ ಪಡಿಸಿಕೊಳ್ಳುವುದು ಸುಲಭ ಎಂದು ಅವಳ ಬಾಸ್ ಆದ ವ್ಯಕ್ತಿಯೇ ಆದೈತ್ಯ ಕಂಪನಿಗೆ ತಿಳಿಸಿದ್ದಾನೆ….

Leave a Reply to ಅಮ್ಮುವಿನಮ್ಮ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.