ಎದೆಯು ಬಿರಿದು ಪದವು ಕುಸಿಯೆ
ತಬ್ಬಿ ಹಿಡಿದ ತಾಯಿಯೆ
ಬೇರುಗಳಲಿ ಜೀವ ತುಂಬಿ
ಚಿಗುರ ಪೊರೆದ ಮಾಯೆಯೆ
ಹೂವು ಕೊಟ್ಟು ಹಣ್ಣು ಕೊಟ್ಟು
ಉಪಚರಿಸಿದ ಮಮತೆಯೆ
ಮುತ್ತು ರತ್ನ ವಜ್ರ ಖಚಿತ
ಖ್ಯಾತಿವೆತ್ತ ಘನತೆಯೆ
ಭೂರಮಣರೆಂದು ಮೆರೆದ ಸಾಮ್ರಾಟರ
ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ
ದೈತ್ಯ ವೃಕ್ಷ ಬಿಳಿಲುಗಳೇ
ನಿನ್ನ ಹರವಿಕೊಂಡ ವೇಣಿಯೆ?
ಕಾಡಿಬೇಡಿ ಬಂದವರಿಗೆ
ನೀಡಲೆಂದೇ ಅವತರಿಸಿದ ದಾನಿಯೆ
ಬೇಡಿದ್ದೆಲ್ಲ ಮೊಗೆದು ಕೊಟ್ಟು
ಬರಿಗೈಯಾದ ಮಾನಿಯೆ
ವಿಷದು ಉರಿಯ ಒಡಲೊಳಿಟ್ಟು
ಹಸಿರ ನಗುವ ಕರುಣೆಯೆ
ಕಣ್ಮನಗಳಿಗೆ ನಿತ್ಯ ಹಬ್ಬ ನಿನ್ನ ರೂಪ
ಹೂವಿನುಡುಗೆಯುಟ್ಟ ರಮ್ಯ ರಮಣಿಯೆ
ಕೋಟಿಕೋಟಿ ಬರಡು ಗ್ರಹದಿ
ಜೀವಧಾತೆ ನೀನೊಬ್ಬಳೇ ದೇವಿಯೇ
ಮೊಳಕೆ ತರಿಸಿ ಜೀವ ಪೊರೆಯೆ
ಇರುವುದೊಂದೇ ಭೂಮಿಯೇ!
ತ್ರಿವೇಣಿ,
ಕವನ ತುಂಬ ಸುಂದರವಾಗಿದೆ. ಕವನದ ಜೊತೆಗಿನ ಚಿತ್ರವಂತೂ ಅತ್ಯಂತ ಅರ್ಥಪೂರ್ಣವಾಗಿದೆ.
ಕಾಕಾ, ಧನ್ಯವಾದಗಳು.